ಗೋಣಿಕೊಪ್ಪಲು, ಮಾ. 10: ಪಂಚಾಯಿತಿ ಸದಸ್ಯರ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಡುವಿನ ಹೊಂದಾಣಿಕೆ ಕೊರತೆಯಿಂದ ಆದ ಪ್ರಮಾದಕ್ಕೆ ಪಿ.ಡಿ.ಓ. ಕ್ಷಮೆ ಕೇಳುವ ಮೂಲಕ ಸದಸ್ಯರ ನಡುವಿನ ಗೊಂದಲಕ್ಕೆ ತೆರೆ ಎಳೆಯಲಾಯಿತು.

ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಪಿ.ಡಿ.ಓ. ಸುರೇಶ್ ಮುಂದೆ ಪ್ರಮಾದ ಆಗದ ರೀತಿಯಲ್ಲಿ ಕೆಲಸ ನಿರ್ವಹಿಸುವದಾಗಿ ಸದಸ್ಯರಿಗೆ ಭರವಸೆ ನೀಡಿದರು. ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಪಿಡಿಓ ಸುರೇಶ್ ಕಾಮಗಾರಿ ಮುನ್ನವೇ ಹಣ ಡ್ರಾ ಮಾಡಿರುವ ಬಗ್ಗೆ ಗ್ರಾ.ಪಂ. ಬಿಜೆಪಿ ಬೆಂಬಲಿತ ಸದಸ್ಯರು ಅಸಮಾದಾನಗೊಂಡು ಪ್ರತಿಭಟನೆ ನಡೆಸಿದ್ದರು. ನಂತರ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಈ ಸಂದರ್ಭ ತುರ್ತು ಕುಡಿಯುವ ನೀರಿನ ಕಾಮಗಾರಿ ಪೂರೈಸಲು ಹಣ ಗುತ್ತಿಗೆದಾರರಿಗೆ ವರ್ಗಾಯಿಸಲಾಗಿತ್ತು ಎಂದು ಪಿ.ಡಿ.ಓ. ಸಮಜಾಯಿಸಿಕೆ ನೀಡುವ ಪ್ರಯತ್ನದಲ್ಲಿ ಸದಸ್ಯರು ಹಾಗೂ ಪಿ.ಡಿ.ಓ. ನಡುವೆ ಮಾತಿನ ಚಕಮಕಿ ನಡೆದಿತ್ತು. ಅಸಮಾದಾನಗೊಂಡ ಸದಸ್ಯರು ಪಿ.ಡಿ.ಓ. ಮೇಲೆ ವಾಕ್‍ಸಮರ ನಡೆಸಿ ಸಭೆಯಿಂದ ಹೊರ ನಡೆದಿದ್ದರು.

ಮಾತಿನ ಚಕಮಕಿಯಲ್ಲಿ ಆದ ಪ್ರಮಾದದಿಂದ ಎಚ್ಚೆತ್ತುಕೊಂಡ ಪಿ.ಡಿ.ಓ. ಸುರೇಶ್ ಪಂಚಾಯಿತಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಅಸಮಾದಾನ ಗೊಂಡಿದ್ದ ಸದಸ್ಯರಿಗೆ ವಿಷಯಗಳನ್ನು ಮನದಟ್ಟು ಮಾಡಿ ಕೊಡುವಲ್ಲಿ ಯಶಸ್ವಿಯಾದರು. ಇದರಿಂದ ಅಸಮಾದಾನಗೊಂಡಿದ್ದ ಬಿಜೆಪಿ ಬೆಂಬಲಿತ ಸದಸ್ಯರಾದ ದಶಮಿ, ಅಮ್ಮತ್ತಿರ ಸುರೇಶ್, ಮೂಕಳೇರ ಲಕ್ಷ್ಮಣ್, ಕಾವ್ಯ ಮಧು ಹಾಗೂ ಜಯಲಕ್ಷ್ಮಿ ಈ ಹಿಂದಿನ ಮಾಸಿಕ ಸಭೆಯಲ್ಲಿ ತಾವುಗಳು ಆದ ಪ್ರಮಾದದ ಬಗ್ಗೆ ವಿಚಾರ ವಿನಿಮಯ ಮಾಡಿದಲ್ಲಿ ಈ ಸಮಸ್ಯೆ ಆಗುತ್ತಿರಲಿಲ್ಲ. ಮುಂದೆ ಎಲ್ಲ ಸದಸ್ಯರೊಂದಿಗೂ ಹೊಂದಾಣಿಕೆ ಮಾಡಿಕೊಂಡು ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವಂತೆ ಸೂಚನೆ ನೀಡಿದರು. ಸದಸ್ಯರ ಮಾತಿಗೆ ಪಿ.ಡಿ.ಓ. ಸುರೇಶ್ ಮುಂದೆ ಪ್ರಮಾದ ಆಗದಂತೆ ಎಚ್ಚರ ವಹಿಸುತ್ತೇನೆ ಎಂದರು. ಉಪಾಧ್ಯಕ್ಷೆ ಮಂಜುಳಾ ಸುರೇಶ್, ಸದಸ್ಯರುಗಳಾದ ರಶಿಕ, ಯಶೋಧ, ಸುಮತಿ, ಸುಬೈದ, ರೂಪ, ಅಣ್ಣೀರ ಹರೀಶ್, ರಾಜು, ಹ್ಯಾರೀಸ್, ಆಲೀರ ರಶೀದ್, ಮಂಜು ಟಿ.ಸಿ.ಆರ್. ಚಂದ್ರಸಿಂಗ್, ಅನೀಶ್ ಮುಂತಾದವರು ಇದ್ದರು.