ವರದಿ: ಅಂಚೆಮನೆ ಸುಧಿ
ಸಿದ್ದಾಪುರ, ಮಾ.9 : ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಬಾಡಗ ಗ್ರಾಮದ ರಸ್ತೆ ಹದೆಗೆಟ್ಟು 15 ವರ್ಷಗಳೇ ಕಳೆದರೂ ಇಂದಿಗೂ ದುರಸ್ತಿ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಿಲ್ಲ ಎಂದು ಆರೋಪಿಸಿ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಬಾಡಗ ಗ್ರಾಮದ ನಿವಾಸಿಗಳು ಎಚ್ಚರಿಸಿದ್ದಾರೆ.
ಗ್ರಾಮದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನನಿತ್ಯ ದುರಸ್ತಿ ಕಾಣದ ಗುಂಡಿ ಬಿದ್ದ ರಸ್ತೆಯಲ್ಲೇ ನಡೆದಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ಭಾಗದಿಂದ ಚುನಾಯಿತರಾಗಿರುವ ಸಂಸದ, ಶಾಸಕ, ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂ ಆಡಳಿತ ಮಂಡಳಿಯವರು ಗ್ರಾಮವನ್ನು ಕಡೆಗಣಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ನಿವಾಸಿ ಹನೀಫಾ ಮಾತನಾಡಿ, ಹಲವಾರು ವರ್ಷಗ ಳಿಂದಲೂ ರಸ್ತೆ ಅಭಿವೃದ್ಧಿಪಡಿಸ ಬೇಕೆಂದು ಒತ್ತಾಯಿಸಿ ಮನವಿಗಳನ್ನು ನೀಡಿದರೂ ಯಾರೂ ಇತ್ತ ಕಡೆ ಗಮನ ಹರಿಸಿಲ್ಲ. ಹದೆಗೆಟ್ಟಿರುವ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಮೈಲಾತ್‍ಪುರದಿಂದ ಬಾಡಗ ಗ್ರಾಮದವರೆಗೆ ದಿನನಿತ್ಯ ನೂರಾರು ಮಂದಿ ಸಂಚರಿಸುತ್ತಿದ್ದರೂ ರಸ್ತೆ ಅಭಿವೃದ್ಧಿಗೆ ಮುಂದಾಗದೆ ಇರುವದು ನಿರ್ಲಕ್ಷ್ಯತನವಾಗಿದೆ. ಗ್ರಾಮದಲ್ಲಿ ಬಸ್ಸುಗಳ ಓಡಾಟವಿಲ್ಲದೆ ದುಬಾರಿ ಹಣ ನೀಡಿ ಜೀಪು ಹಾಗೂ ಆಟೋಗಳನ್ನು ಬಳಸಿಕೊಂಡು ಸಂಚರಿಸಬೇಕಾಗಿದ್ದು, ರಸ್ತೆ ಹದೆಗೆಟ್ಟಿರುವದರಿಂದ ತುರ್ತು ಸಂದರ್ಭದಲ್ಲಿ ಬಾಡಿಗೆಗೆ ವಾಹನಗಳು ಸಹ ಈ ಮಾರ್ಗದಲ್ಲಿ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಅವರು, ಕಳೆದ ಚುನಾವಣೆ ಸಂದರ್ಭ ಭರವಸೆ ನೀಡಿ ರಸ್ತೆ ಬದಿಯಲ್ಲಿ ಕಲ್ಲುಗಳನ್ನು ಇಳಿಸಿ, ಚುನಾವಣೆಯ ನಂತರ ಕಲ್ಲುಗಳನ್ನು ಮತ್ತೆ ತೆಗೆದುಕೊಂಡು ಹೋಗಿದ್ದಾರೆ. ಈ ಭಾಗದ ಶಾಸಕರು ಸಮೀಪದ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದರೂ ಬಾಡಗ ಗ್ರಾಮದತ್ತ ಇದುವರೆಗೂ ಮುಖ ಮಾಡಿಲ್ಲ ಎಂದು ದೂರಿದರು. ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾರೂ ಸ್ಪಂದಿಸದ ಕಾರಣ ಈ ಬಾರಿಯ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುವದಾಗಿ ಗ್ರಾಮಸ್ಥರು ನಿರ್ಧಾರ ಮಾಡಿರುವದಾಗಿ ಅವರು ಹೇಳಿದರು. ಈ ಸಂದರ್ಭ ಗ್ರಾಮದ ಪ್ರಮುಖರಾದ ಅಶ್ರಫ್, ಶಿಹಾಬ್, ಅಲಿ, ಜಾಫರ್, ಸಾದಿಕ್, ರಶೀದ್ ಸೇರಿದಂತೆ ಮತ್ತಿತರರು ಇದ್ದರು.