ಶಾಲಾ ವಾರ್ಷಿಕೋತ್ಸವ
ಮಡಿಕೇರಿ: ಮಡಿಕೇರಿಯ ಐ.ಟಿ.ಐ. ಹಿಂಭಾಗದಲ್ಲಿರುವ ಕಿಡ್ಸ್ ಪ್ಯಾರಾಡೈಸ್ ಪೂರ್ವ ಪ್ರಾಥಮಿಕ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್, ಫಸ್ಟ್ ಗ್ರೇಡ್ ಕಾಲೇಜಿನ ಸಹ ಪ್ರೊ. ಡಾ. ಕೂಡಕಂಡಿ ದಯಾನಂದ, ಹಿರಿಯ ವೈದ್ಯ ಡಾ. ಮನೋಹರ್ ಪಾಟ್ಕರ್, ಜಯಲಕ್ಷ್ಮಿ ಪಾಟ್ಕರ್ ಆಗಮಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷೆ ಬಿ.ಇ. ವಸಂತಿ, ಉಪಾಧ್ಯಕ್ಷ ಗಾಳಿಬೀಡಿನ ಕೃಷಿಕ ವಾಸು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಬಿಂದು ಹರೀಶ್ ಸ್ವಾಗತಿಸಿ, ಶಾಲಾ ವರದಿಯನ್ನು ವಾಚಿಸಿದರು. ಶಾಲಾ ಸಂಚಾಲಕ ಹರೀಶ್ ಸರಳಾಯ ನಿರೂಪಿಸಿ, ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಅವರನ್ನು ಸನ್ಮಾನಿಸಲಾಯಿತು. ಶಾಲಾ ವಸ್ತು ಪ್ರದರ್ಶನವನ್ನು ಡಾ. ಮನೋಹರ್ ಪಾಟ್ಕರ್ ಉದ್ಘಾಟಿಸಿದರು. ನಂತರ ಮಕ್ಕಳಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ತಾಲೂಕು ಕ.ಸಾ.ಪ. ಅಧ್ಯಕ್ಷ ಕುಡೆಕಲ್ ಸಂತೋಷ್ ಮೊದಲಾದವರು ಪಾಲ್ಗೊಂಡಿದ್ದರು.
ಜಿಲ್ಲಾಮಟ್ಟದ ವಾಣಿಜ್ಯ ಹಬ್ಬ
ಕುಶಾಲನಗರ: ಜಿಲ್ಲಾಮಟ್ಟದ ಉದ್ಭವ್-2018 ವಾಣಿಜ್ಯ ಹಬ್ಬ ಕಾರ್ಯಕ್ರಮ ಅಳುವಾರ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯಿತು. ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ವಾಣಿಜ್ಯ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಈಶ್ವರ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ಸಮಗ್ರ ಅಭಿವೃದ್ಧಿ ಹೊಂದಲು ಅಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಉತ್ತಮ ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಅಂತರ್ ಕಾಲೇಜು ವಾಣಿಜ್ಯ ಹಬ್ಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರಿಂದ, ಜಿಲ್ಲೆಯ ವಿವಿಧೆಡೆಗಳ ಕಾಲೇಜಿನ ವಿದ್ಯಾರ್ಥಿಗಳ ನಡುವಿನ ಸಂಪರ್ಕವನ್ನು ಸಾಧಿಸುವದರ ಜೊತೆಗೆ, ಪರಸ್ಪರ ಅರಿವು ಮೂಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಉಪನ್ಯಾಸಕರಾದ ಮೇಕಂಡ ಪಿ. ಗೀತಾಂಜಲಿ ಗುರುಪ್ರಸಾದ್, ಮಹಮ್ಮದ್ ಇರ್ಷಾದ್, ಸಂಗೀತ ಎಂ. ಬಿದ್ದಪ್ಪ, ಸಿ.ಪ್ರಸನ್ನ, ವಾಣಿಜ್ಯ ಸಂಘದ ಅಧ್ಯಕ್ಷ ಕೆ.ಕೆ. ಪ್ರಸಾದ್, ಉಪಾಧ್ಯಕ್ಷೆ ಕೆ. ಅಕ್ಷತಾ, ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.
ಸಾಂಸ್ಕøತಿಕ ಕಾರ್ಯಕ್ರಮ-ನಾಟಕ ಪ್ರದರ್ಶನ
ಮಡಿಕೇರಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಡಿಕೇರಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಾಂಸ್ಕøತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ಜಿಲ್ಲೆಯ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಪರಿಸರ ಗೀತೆ ಹಾಗೂ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ನೆಲ-ಜಲ, ಜೀವ ವೈವಿಧ್ಯತೆ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಹಾಡಿದ ಪರಿಸರ ಗೀತೆ ಹಾಗೂ ಗಾಯನ ಪರಿಸರ ಪ್ರಜ್ಞೆ ಮೂಡಿಸಲು ಸಹಕಾರಿಯಾಯಿತು.
ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಗಳಿಸಿದ ಪಾರಾಣೆ ಪ್ರೌಢಶಾಲೆಯ ಇಕೋ-ಕ್ಲಬ್‍ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಹಸಿರೇ ಉಸಿರು ಎಂಬ ಪರಿಸರ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಪಾರಾಣೆ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎ.ಜೆ. ರಜನಿ ಅವರ ಪರಿಕಲ್ಪನೆ ಮತ್ತು ಶಿಕ್ಷಕ ತಿಪ್ಪೇಸ್ವಾಮಿ ಅವರ ನಿರ್ದೇಶನದಲ್ಲಿ ರೂಪುಗೊಂಡಿರುವ ಈ ನಾಟಕವು ಜನರಲ್ಲಿ ಗಿಡ-ಮರಗಳ ಸಂರಕ್ಷಣೆ, ನೆಲ-ಜಲ ಮತ್ತು ಮಣ್ಣಿನ ಸಂರಕ್ಷಣೆ ಹಾಗೂ ನೀರು ಪೋಲಾಗದಂತೆ ತಡೆಗಟ್ಟುವಿಕೆ ಕುರಿತು ಜನಜಾಗೃತಿ ಮೂಡಿಸಲು ಸಹಕಾರಿಯಾಯಿತು.
ಹಟ್ಟಿಹೊಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪರಿಸರ ರಕ್ಷಣೆ ಮತ್ತು ಕಸದ ನಿರ್ವಹಣೆ ಕುರಿತಂತೆ ಪ್ರದರ್ಶಿಸಿದ ಪ್ರಹಸನ ಕೂಡ ಗಮನ ಸೆಳೆಯಿತು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ, ಜಿಲ್ಲಾ ಬಿಸಿಎಂ ಅಧಿಕಾರಿ ಕೆ.ವಿ. ಸುರೇಶ್, ಉಪ ಪರಿಸರ ಅಧಿಕಾರಿ ಡಾ. ಎಂ.ಕೆ. ಸುಧಾ, ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ವಿಜ್ಞಾನ ಪರಿಷತ್‍ನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್ ಇದ್ದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಯು. ರಂಜಿತ್ ನಿರ್ವಹಿಸಿದರು. ಶಿಕ್ಷಕರಾದ ಪಿ.ಎಸ್. ರವಿಕೃಷ್ಣ, ಸಿ.ಎಸ್. ಸುರೇಶ್, ಜಿ. ಶ್ರೀಹರ್ಷ ಇತರರು ಇದ್ದರು.
ರಾಷ್ಟ್ರಮಟ್ಟಕ್ಕೆ ಆಯ್ಕೆ
ಗೋಣಿಕೊಪ್ಪ ವರದಿ: ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡ ಇಲ್ಲಿನ ಕಾಪ್ಸ್ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಕೆ. ತಮನ್ನಾ ಅಪ್ಪಚ್ಚು ಪ್ರದರ್ಶಿಸಿದ್ದ ವಿಜ್ಞಾನ ಮಾದರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ದಾವಣಗೆರೆಯ ಜೈನ್ ವಿದ್ಯಾಲಯದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಕಾಡಾನೆಗಳು ನಾಡಿಗೆ ಬರುವಾಗ ಅದರ ಅರಿವಿಕೆಗಾಗಿ ತಯಾರಿಸಿದ್ದ ಎಲಿಫೆಂಟ್ ಡಿಟೆಕ್ಟರ್ ಎಂಬ ಮಾದರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಬಿಟಿಸಿಜಿ ಕಾಲೇಜಿನಲ್ಲಿ ರಕ್ತದಾನ
ಸೋಮವಾರಪೇಟೆ: ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್, ರೆಡ್‍ಕ್ರಾಸ್ ಘಟಕ ಮತ್ತು ಮಡಿಕೇರಿ ಜಿಲ್ಲಾಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿಯ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, 18 ವರ್ಷಗಳಿಗಿಂತ ಮೇಲ್ಪಟ್ಟ ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
ರಕ್ತ ನೀಡಿದ 24 ಗಂಟೆಯೊಳಗೆ ರಕ್ತ ನವೀಕರಣಗೊಳ್ಳುತ್ತದೆ. ರಕ್ತವನ್ನು ದಾನಿಯಿಂದ ಪಡೆದು ಅದನ್ನು ವ್ಶೆಜ್ಞಾನಿಕವಾಗಿ ಶೇಖರಿಸುವ ಮೂಲಕ ಅಗತ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳಲಾಗುವದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಈ. ಐಪು ವಹಿಸಿದ್ದರು. ವೇದಿಕೆಯಲ್ಲಿ ರೆಡ್ ರಿಬ್ಬನ್ ಕ್ಲಬ್, ರೆಡ್‍ಕ್ರಾಸ್ ಘಟಕದ ಸಂಚಾಲಕ ಎಂ.ಎಸ್. ಶಿವಮೂರ್ತಿ, ಪ್ರಾಧ್ಯಾಪಕರಾದ ಶ್ರೀಧರ್, ಕಮಲಾಕ್ಷ ಬಲ್ಯಾಯ, ರಾಜು, ಕೆ.ಎಸ್. ಧನಲಕ್ಷ್ಮಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ 17 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಅತ್ಯುತ್ತಮ ಅಧಿಕಾರಿ ಪ್ರಶಸ್ತಿ
ಮಡಿಕೇರಿ: ಕರ್ನಾಟಕ ರಾಜ್ಯ ಎನ್.ಎಸ್.ಎಸ್. ಅತ್ಯುತ್ತಮ ಅಧಿಕಾರಿ ಪ್ರಶಸ್ತಿಯನ್ನು ಮಂದೆಯಂಡ ವನಿತ್ ಕುಮಾರ್ ಪಡೆದಿದ್ದಾರೆ. ಇವರು ಆಲೂರು-ಸಿದ್ದಾಪುರದ ಮಂದೆಯಂಡ ಸಿ. ನಾಣಯ್ಯ ಮತ್ತು ಪೊನ್ನಮ್ಮ ಅವರ ಪುತ್ರನಾಗಿದ್ದು, ಕಾವೇರಿ ಕಾಲೇಜು ಗೋಣಿಕೊಪ್ಪದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರು ಹಾಗೂ ಎನ್.ಎಸ್.ಎಸ್. ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರಿಗೆ ಈ ಹಿಂದೆ ನ್ಯಾಷನಲ್ ಯಂಗ್ ಲೀಡರ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಅತ್ಯುತ್ತಮ ಅಧಿಕಾರಿ ಪ್ರಶಸ್ತಿ ಲಭಿಸಿದೆ. ಕೊಡಗಿನ ಪದವಿ ಕಾಲೇಜಿನಲ್ಲಿ ಈ ಮೂರು ಪ್ರಶಸ್ತಿ ಪಡೆದ ಮೊದಲ ಎನ್.ಎಸ್.ಎಸ್. ಅಧಿಕಾರಿಯಾಗಿದ್ದಾರೆ.