ಮಡಿಕೇರಿ, ಮಾ. 9: ದಕ್ಷಿಣ ಕೊಡಗಿನ ಕಿರುಗೂರು, ಬಲ್ಯಮಂಡೂರು, ನಾಲ್ಕೇರಿ, ಬೆಸಗೂರು ಸುತ್ತಮುತ್ತಲಿನ ಬೆಳೆಗಾರರಿಗೆ ಕಾಫಿ ಖರೀದಿ ಹಣ ಪಾವತಿಸದೆ ವಂಚಿಸಿರುವ ಪ್ರಕರಣವನ್ನು ಸಂಧಾನದಿಂದ ಬಗೆಹರಿಸುವ ದಿಸೆಯಲ್ಲಿ ಕೇರಳ ಮೂಲದ ಕೆಲವರು ಕಸರತ್ತು ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಗೊತ್ತಾಗಿದೆ.
ಇಂದು ಪೊನ್ನಂಪೇಟೆಯಲ್ಲಿ ವಂಚನೆಗೆ ಒಳಗಾಗಿರುವ ಬೆಳೆಗಾರರು ಹಾಗೂ ಕೆಲವು ಸಂಘಟನೆಗಳ ಪ್ರಮುಖರು ಸಭೆ ಸೇರಿ ಸಾಕಷ್ಟು ಸಮಾಲೋಚನೆ ನಡೆಸಿದ್ದು, ಬೆಳೆಗಾರರಿಗೆ ವಂಚಿಸಿರುವ ವ್ಯಾಪಾರಿಗಳಿಬ್ಬರ ಪತ್ತೆಗೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸುವz Àರೊಂದಿಗೆ ಕಾಲಾವಕಾಶ ನೀಡುವ ತೀರ್ಮಾನ ಕೈಗೊಂಡಿರುವದಾಗಿ ತಿಳಿದುಬಂದಿದೆ.
ಈಗಾಗಲೇ ಕಾಫಿ ಮಾರಾಟ ಗೊಳಿಸಿ ಹಣ ಪಡೆಯಲಾರದೆ ಅನ್ಯಾಯಕ್ಕೆ ಒಳಗಾಗಿರುವ ಬೆಳೆಗಾರರಲ್ಲಿ ಕೆಲವರು ಮುಂದೆ ಕೊಡಗಿನಲ್ಲಿ ಇಂತಹ ಪರಿಸ್ಥಿತಿ ಯಾರಿಗೂ ಎದುರಾಗದಂತೆ ಜಾಗೃತೆ ವಹಿಸುವ ಇಂಗಿತ ವ್ಯಕ್ತಪಡಿಸಿದರೆನ್ನಲಾಗಿದೆ. ಬದಲಾಗಿ ಕೇವಲ ಅಲ್ಪಸ್ವಲ್ಪ ಕಾಫಿಯನ್ನೇ ನಂಬಿ ಬದುಕು ನಡೆಸುವವರಿಗೆ ಧೃತಿಗೆಡದಂತೆ ನ್ಯಾಯ ದೊರಕಿಸಲು ಪ್ರಯತ್ನಿಸಬೇಕೆಂದು ನಿರ್ಧಾರ ತೆಗೆದುಕೊಂಡಿರುವದಾಗಿ ಗೊತ್ತಾಗಿದೆ.
ಗೋಣಿಕೊಪ್ಪಲು ಸುತ್ತಮುತ್ತ ವ್ಯಾಪಾರ ನಡೆಸುತ್ತಿರುವ ಕೇರಳ ಮೂಲದ ಕೆಲವರು, ಈಗಿನ ಬೆಳವಣಿಗೆಯಿಂದ ಕಸಿವಿಸಿಗೊಂಡಿದ್ದು, ಬೆಳೆಗಾರರು ಇರಿಸಿದ್ದ ನಂಬಿಕೆಗೆ ವಿಶ್ವಾಸದ್ರೋಹ ಮಾಡಿರುವ ಬಿಜೇಶ್ ಹಾಗೂ ಬಿಜು ಜಾಕೋಬ್‍ನನ್ನು ಪತ್ತೆ ಹಚ್ಚಿ ಹಣ ಹಿಂತಿರುಗಿಸಲು ಮನವೊಲಿಸುವ ಆಶಯ ವ್ಯಕ್ತಪಡಿಸಿದ್ದಾಗಿ ಹೇಳಲಾಗುತ್ತಿದೆ.
ಇನ್ನು ಪೊಲೀಸ್ ಇಲಾಖೆ ಯಿಂದ ಕೂಡ ಕಾನೂನಿನ ಚೌಕಟ್ಟಿನಲ್ಲಿ ಸಂಬಂಧಿಸಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ವಂಚನೆಗೆ ಒಳಗಾಗಿರುವ ಬೆಳೆಗಾರರಿಗೆ ಹಣ ಹಿಂತಿರುಗಿಸಲು ಅನುಸರಿಸಬಹುದಾದ ಮಾರ್ಗೋ ಪಾಯ ಹುಡುಕುತ್ತಿರುವದಾಗಿ ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ನಾಗಪ್ಪ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಬೆಳೆಗಾರರು ನೀಡಿರುವ ದೂರುಗಳನ್ನು ಸ್ವೀಕರಿಸಲಾಗಿದ್ದು, ತಲೆಮರೆಸಿ ಕೊಂಡಿರುವ ವ್ಯಾಪಾರಿಗಳ ಪತ್ತೆಗೆ ಎಲ್ಲಾ ಪ್ರಯತ್ನ ನಡೆದಿದೆ ಎಂದು ಅವರು ಸುಳಿವು ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ಇಂದು ವಂಚಿತ ಬೆಳೆಗಾರರೊಂದಿಗೆ ಮಾತುಕತೆ ನಡೆಸಿರುವ ಕಾಫಿ ಪಾನೀಯ ಹೋರಾಟ ಸಮಿತಿ ಪ್ರಮುಖ ಎಂ.ಎಂ. ರವೀಂದ್ರ, ಜಿಲ್ಲೆಯಲ್ಲಿ ಪದೇ ಪದೇ ವ್ಯಾಪಾರಿಗಳು ಬೆಳೆಗಾರರಿಗೆ ವಂಚಿಸುತ್ತಿರುವ ಬಗ್ಗೆ ಉನ್ನತಮಟ್ಟದ ತನಿಖೆ ಅಗತ್ಯವೆಂದು ಒತ್ತಾಯಿಸಿದ್ದಾರೆ.
ವಂಚಿತ ಬೆಳೆಗಾರರು ಮಾತ್ರ ಕಾದುನೋಡುವ ತಂತ್ರ ಅನುಸರಿಸಲು ನಿರ್ಧರಿಸಿರುವದಾಗಿ ವಿಶ್ವಸನೀಯ ಮೂಲಗಳು ತಿಳಿಸಿವೆ.