ಸೋಮವಾರಪೇಟೆ,ಮಾ.9: ಕಳೆದ 4 ವರ್ಷಗಳ ಹಿಂದೆ ವಿವಾಹವಾಗಿ, 3 ವರ್ಷಗಳ ಹಿಂದೆ ವಿವಾಹ ವಿಚ್ಚೇದನ ಪಡೆದಿದ್ದ ಮಹಿಳೆಯೋರ್ವರು ಇಂದು ತನ್ನ ಮನೆಯಲ್ಲಿಯೇ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾರ ಗ್ರಾಮದಲ್ಲಿ ನಡೆದಿದೆ.ಚಿಕ್ಕಾರ ಗ್ರಾಮದ ತಮ್ಮಯ್ಯ-ಪ್ರೇಮ ದಂಪತಿಗಳ ಪ್ರಥಮ ಪುತ್ರಿ ಸೌಮ್ಯ(32) ಎಂಬವರೇ ಗುಂಡು ಹಾರಿಸಿಕೊಂಡು ಇಹಲೋಕ ತ್ಯಜಿಸಿದವರಾಗಿದ್ದು, ಇಂದು ಅಪರಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ.ಕಳೆದ 4 ವರ್ಷಗಳ ಹಿಂದೆ ಮಾಗೇರಿ ಸಮೀಪದ ಹಿಜ್ಜನಳ್ಳಿ ಗ್ರಾಮದ ಯುವಕನೊಂದಿಗೆ ವಿವಾಹವಾಗಿದ್ದ ಸೌಮ್ಯ ಅವರು ನಂತರ ಶನಿವಾರಸಂತೆಯಲ್ಲಿ ನೆಲೆಸಿದ್ದರು. ವೈವಾಹಿಕ ಜೀವನ ಸಮರ್ಪಕವಾಗದ ಹಿನ್ನೆಲೆ ವಿವಾಹವಾಗಿ ಒಂದು ವರ್ಷಕ್ಕೇ ಗಂಡನಿಂದ ವಿಚ್ಚೇದನ ಪಡೆದು, ಮೈಸೂರಿನ ಬೃಂದಾವನ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಕಳೆದ ಮೂರು ದಿನಗಳ ಹಿಂದಷ್ಟೇ ಮೈಸೂರಿಗೆ ತೆರಳಿದ ಪೋಷಕರು, ಸೌಮ್ಯ ಅವರನ್ನು ಚಿಕ್ಕಾರದ ಮನೆಗೆ ಕರೆತಂದಿದ್ದರು. ಇಂದು ಮನೆ ಮಂದಿ ಗದ್ದೆ ಹಾಗೂ ತೋಟ ಕೆಲಸದಲ್ಲಿ ತೊಡಗಿದ್ದ ಸಂದರ್ಭ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೌಮ್ಯ ಅವರು ಮನೆಯಲ್ಲಿದ್ದ ಕೋವಿಯಿಂದ ಎದೆಯ ಭಾಗಕ್ಕೆ ಗುಂಡು ಹೊಡೆದುಕೊಂಡಿದ್ದಾರೆ.

ಪಟ್ಟಣಕ್ಕೆ ತೆರಳಿದ್ದ ಇವರ ಸಹೋದರ ಶರತ್ ಆಗಷ್ಟೇ ಮನೆಗೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಸಹೋದರಿ ಒದ್ದಾಡುತ್ತಿದ್ದುದು ಕಂಡುಬಂದಿದೆ. ತಕ್ಷಣ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ಮಾಡಿ ವಿಷಯ ತಿಳಿಸಿದ ಮೇರೆ ಸ್ಥಳಕ್ಕಾಗಮಿಸಿ ವೈದ್ಯಾಧಿಕಾರಿ ಇಂದೂಧರ್ ಅವರು, ಗಾಯಾಳುವನ್ನು ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸುವಂತೆ ಸಲಹೆ ನೀಡಿದ್ದಾರೆ.

ವಾಹನದಲ್ಲಿ ಸೌಮ್ಯ ಅವರನ್ನು ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತದೇಹದಲ್ಲಿರುವ

(ಮೊದಲ ಪುಟದಿಂದ) ಗುಂಡು ಗಳನ್ನು ಪತ್ತೆ ಹಚ್ಚಿ ಹೊರ ತೆಗೆಯಲು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಎದೆಯ ನಡುಭಾಗಕ್ಕೆ ಗುಂಡು ತಗುಲಿದ್ದು, ದೇಹದ ಹಿಂಬದಿಯಿಂದ ಹೊರಬಂದು ಮನೆಯ ಕಿಟಕಿ ಗಾಜುಗಳನ್ನು ಪುಡಿಗಟ್ಟಿದೆ. ಮನೆಯೊಳಗೆ ರಕ್ತ ಚೆಲ್ಲಾಡಿದ್ದು ಭೀಭತ್ಸ ದೃಶ್ಯ ಗೋಚರಿಸಿದೆ.

ವಿವಾಹ ವಿಚ್ಚೇದಿತರಾಗಿದ್ದ ಸೌಮ್ಯ ಅವರಿಗೆ ಎರಡನೇ ಸಂಬಂಧ ನೋಡಲು ಮನೆಯವರು ಮುಂದಾಗಿದ್ದರು. ಈ ಹಿಂದಿನ ಪ್ರಯತ್ನಗಳೂ ಸಫಲವಾಗಿರಲಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಕಳೆದ ಎರಡು ದಿನಗಳ ಹಿಂದಷ್ಟೇ ಗೌಡಳ್ಳಿಯಲ್ಲಿ ಪತ್ನಿಯನ್ನು ಹತ್ಯೆಗೈದು ಪತಿಯೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದ್ದು, ಈ ದುರ್ಘಟನೆ ಮಾಸುವ ಮುನ್ನವೇ ಇದೀಗ ಮಹಿಳೆಯೋರ್ವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾ ಗಿರುವದು ಗ್ರಾಮಸ್ಥರಲ್ಲಿ ಬೇಸರದ ಭಾವ ಮೂಡುವಂತೆ ಮಾಡಿದೆ.