ಕುಶಾಲನಗರ, ಮಾ 9: ಕೊಪ್ಪ ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ಸಾಹಿನಾ ಭಾನು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮುಂದಿನ 30 ತಿಂಗಳ ಅವಧಿಗೆ ಸಾಮಾನ್ಯ ಮಹಿಳೆ ವಿಭಾಗದಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿದ್ದರಾಜು ತಿಳಿಸಿದ್ದಾರೆ.
ಈ ಹಿಂದಿನ ಅಧ್ಯಕ್ಷರಾಗಿದ್ದ ಸಾವಿತ್ರ ರಾಮಣ್ಣ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಚುನಾವಣೆ ನಡೆದಿದೆ. 24 ಸದಸ್ಯರನ್ನು ಹೊಂದಿರುವ ಗ್ರಾಮಪಂಚಾಯ್ತಿ ಸದಸ್ಯರಲ್ಲಿ ಸಾಹಿನಾ ಭಾನು ಗ್ರಾಮದ ದೊಡ್ಡಹೊಸೂರು ವಿಭಾಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದರು.
ಮುಂದಿನ ದಿನಗಳಲ್ಲಿ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುವದರೊಂದಿಗೆ ಮೂಲಭೂತ ಸೌಕರ್ಯಗಳಾದ ಕುಡಿವ ನೀರು, ರಸ್ತೆ, ಬೀದಿ ದೀಪ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವದು, ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿವ ನೀರಿನ ಘಟಕದ ಯೋಜನೆ ಸಧ್ಯದಲ್ಲಿಯೇ ಉದ್ಘಾಟಿಸಲಾಗುವದು ಎಂದು ತಿಳಿಸಿದ ಸಾಹಿನಾ ಭಾನು ಕೊಪ್ಪ ಗ್ರಾಮಪಂಚಾಯ್ತಿಗೆ ಕಾವೇರಿ ನದಿಯಿಂದ ಕುಡಿವ ನೀರು ಒದಗಿಸಲು ರೂ. 30 ಕೋಟಿ ವೆಚ್ಚದ ಯೋಜನೆ ಬಹುತೇಕ ಪೂರ್ಣಗೊಂಡಿದ್ದು ಸಧ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದರು. ಪಂಚಾಯ್ತಿ ಅನುದಾನವನ್ನು ಸಮರ್ಪಕವಾಗಿ ಬಳಸುವ ಮೂಲಕ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲಾಗುವದು ಎಂದಿದ್ದಾರೆ.
ಈ ಸಂದರ್ಭ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್, ಉಪಾಧ್ಯಕ್ಷ ಯಶವಂತಕುಮಾರ್, ಮಾಜಿ ಅಧ್ಯಕ್ಷೆ ಸಾವಿತ್ರಿ ರಾಮಣ್ಣ ಸೇರಿದಂತೆ ಸರ್ವ ಸದಸ್ಯರು ಇದ್ದರು.