ಕರಿಕೆ, ಮಾ. 8: ಜಿಲ್ಲೆಯ ಗಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಮೂವತ್ತು ಕಿ.ಮೀ. ಅಂತರ ವಿರುವ ಭಾಗಮಂಡಲ- ಕರಿಕೆ ಅಂತರ್ ರಾಜ್ಯ ಹೆದ್ದಾರಿ ಹಲವು ವರ್ಷಗಳಿಂದ ಹದಗೆಟ್ಟು ಸಂಚಾರಕ್ಕೆ ಅನಾನುಕೂಲ ವಾದರೂ ಸರಕಾರ, ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವದು ನಿಜಕ್ಕೂ ದುರದೃಷ್ಟಕರ.ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸುಮಾರು ಎಪ್ಪತ್ತು ಕಿ.ಮಿ. ಅಂತರವಿರುವ ಈ ರಸ್ತೆ ಕರಿಕೆ ಮೂಲಕ ಹಾದು ಹೋಗಿ ಕೇರಳ ಹಾಗೂ ದ.ಕ.ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತದೆ. ಕಳೆದ ಐದು ವರ್ಷಗಳಿಂದ ಡಾಮರೀಕರಣ ಗೊಳ್ಳದೆ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಪ್ರಯಾಣಿಕರು ಪರದಾಡುವಂತಾಗಿದೆ. ಕರಿಕೆ ಯಿಂದ ಹದಿನೈದು ಕಿ.ಮೀ. ಅರಣ್ಯದೊಳಗೆ ಹಾದು ಹೋಗುವ ಈ ರಸ್ತೆಯು ಮಳೆಗಾಲದಲ್ಲಿ ಧಾರಕಾರ ಮಳೆ ಸುರಿಯುವ ಕಾರಣ ಸಂಪೂರ್ಣವಾಗಿ ಡಾಮರು ಕಿತ್ತುಹೋಗಿದ್ದು ಸರಕಾರ ಈ ರಸ್ತೆಯ ಬಗ್ಗೆ ಗಮನ ಹರಿಸದಿರುವದು ದುರದೃಷ್ಟಕರ.

ವರ್ಷಕೊಮ್ಮೆ ಕಾಟಾಚಾರಕ್ಕೆ ಕಾಡು ಕಡಿದು ಗುಂಡಿ ಮುಚ್ಚುವ ಲೋಕೋಪಯೋಗಿ ಇಲಾಖೆ ಸರಕಾರಕ್ಕೆ ಪೂರ್ಣ ಪ್ರಮಾಣದ ಡಾಮರೀಕರಣಕ್ಕೆ ಶಿಫಾರಸು ಮಾಡುವ ಬದಲು ಈ ಬಾರಿ ಕೂಡ ತನ್ನ ಹಳೆ ಚಾಳಿ ಮುಂದುವರೆಸಿದ್ದು ಅಲ್ಲಲ್ಲಿ ಗಾಯಕ್ಕೆ ಮದ್ದು ಹಚ್ಚಿದಂತೆ ತೇಪೆ ಹಚ್ಚುವ ಕೆಲಸ ಆರಂಭಿಸಿದೆ. ಇದು ಸಂಪೂರ್ಣ ಕಳಪೆ ಕಾಮಗಾರಿ ಯಾಗಿದ್ದು ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ನಿಂತು ಕಾಮಗಾರಿ ನಿರ್ವಹಿಸುವ ಬದಲು ಈಭಾಗಕ್ಕೆ ಸುಳಿಯದಿರುವದು ಸಂಶಯಕ್ಕೆ ಕಾರಣವಾಗಿದೆ.

ನಾಲ್ಕು ಕಿ.ಮೀ. ಪೂರ್ಣ ಡಾಮರೀಕರಣ ಇದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದರೂ ಮಾರ್ಚ್ ಕೊನೆಯಾಗುತ್ತ ಬಂದರೂ ಇದುವರೆಗೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಮಡಿಕೇರಿ ಕಡೆಗೆ ಬರಬೇಕಾದರೆ ಈ ಭಾಗದ ಜನತೆ ಸುಳ್ಳ ಮಾರ್ಗವಾಗಿ ಬಳಸಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸರಿಪಡಿಸುವ ಬಗ್ಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ

(ಮೊದಲ ಪುಟದಿಂದ) ಬೋಪಯ್ಯ ಕಸಾಪ ಅಧ್ಯಕ್ಷ ಕೆಡಿಪಿ ಸಭೆಯಲ್ಲಿ ಗಮನ ಸೆಳೆದಿದ್ದರೂ, ಅಧಿಕಾರಿಗಳು ಮಾತ್ರ ಕಿಂಚಿತ್ತು ಗಮನ ಹರಿಸದಿರುವ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಬಗ್ಗೆ ಚಕಾರವೆತ್ತದ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ಇದೀಗ ಚುನಾವಣೆ ಸಮೀಪಿಸುತ್ತಿದ್ದು ಇನ್ನಾದರೂ ಸಂಬಂಧಿಸಿದ ಇಲಾಖೆ ಹಾಗೂ ಈ ಭಾಗದ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಶೀಘ್ರವಾಗಿ ರಸ್ತೆ ದುರಸ್ತಿಗೊಳಿಸಬೇಕೆಂದು ಆಗ್ರಹಸಿದ್ದಾರೆ.

- ಹೊದ್ದೆಟ್ಟಿ ಸುಧೀರ್