ಸೋಮವಾರಪೇಟೆ, ಮಾ. 8: ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಕಳೆದ ಹಲವಾರು ವರ್ಷಗಳಿಂದ ಸೋಮವಾರಪೇಟೆ ಪಟ್ಟಣದಲ್ಲಿ ತಿರುಗುತ್ತಿದ್ದ ಮಾನಸಿಕ ರೋಗಿಯೋರ್ವನ ಆರೈಕೆಗೆ ಒಕ್ಕಲಿಗ ಯುವ ವೇದಿಕೆ ಮುಂದಾಗಿದ್ದು, ಆತನನ್ನು ಬೆಂಗಳೂರಿನ ನಿಮ್ಹಾನ್ಸ್‍ಗೆ ದಾಖಲಿಸಲಾಗಿದೆ.

ಕಳೆದ 10 ವರ್ಷಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಪಟ್ಟಣದಲ್ಲಿ ಹಗಲು ಅಲೆಯುತ್ತಿದ್ದ ಈ ವ್ಯಕ್ತಿ ರಾತ್ರಿಯಾಗುತ್ತಿದ್ದಂತೆ ಶೆಲ್ಟರ್‍ಗಳಲ್ಲಿ ಮಲಗುತ್ತಿದ್ದರು. ಸೂಕ್ತ ಚಿಕಿತ್ಸೆ ಲಭಿಸದ ಹಿನ್ನೆಲೆ ದಿನದಿಂದ ದಿನಕ್ಕೆ ಜರ್ಝರಿತವಾಗುತ್ತಿದ್ದ ಇವರನ್ನು ತಾಲೂಕು ಒಕ್ಕಲಿಗ ಯುವ ವೇದಿಕೆಯ ಸದಸ್ಯರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಬಿ.ಕಾಂ. ಪದವೀಧರನಾಗಿರುವ ಈ ವ್ಯಕ್ತಿ ಮಾನಸಿಕ ರೋಗಕ್ಕೆ ತುತ್ತಾಗಿ ಕೆಲವೊಮ್ಮೆ ಸಾರ್ವಜನಿಕರಿಗೆ ಮುಜುಗರವಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು. ಇದನ್ನು ಗಮನಿಸಿದ ಯುವಕರು, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಅಲ್ಲಿಂದ ಅನುಮತಿ ಪಡೆದು ರೋಗಿಯನ್ನು ಸ್ವಚ್ಛಗೊಳಿಸಿ ನಿಮ್ಹಾನ್ಸ್‍ಗೆ ಸೇರಿಸಿದ್ದಾರೆ.

ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷ ದೀಪಕ್, ಪದಾಧಿಕಾರಿಗಳಾದ ಚಕ್ರವರ್ತಿ ಸುರೇಶ್, ನತೀಶ್ ಮಂದಣ್ಣ, ಮಸಗೋಡು ದಯಾನಂದ್, ಗೌಡಳ್ಳಿ ಪೃಥ್ವಿ, ಪ್ರಸ್ಸಿ, ವಿಶ್ವ ಒಕ್ಕಲಿಗ ಯುವ ಬ್ರಿಗೇಡ್‍ನ ರಾಜ್ಯಾಧ್ಯಕ್ಷ ಗಿರೀಶ್ ಮಲ್ಲಪ್ಪ ಅವರುಗಳು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.