ಸೋಮವಾರಪೇಟೆ, ಮಾ. 8: ಸಮೀಪದ ಕೋವರ್ಕೊಲ್ಲಿ ಬಳಿಯ ಮೀಸಲು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರ ಮುಂಜಾಗ್ರತೆಯಿಂದಾಗಿ ಭಾರೀ ಪ್ರಮಾಣದ ಅರಣ್ಯ ನಾಶ ತಪ್ಪಿದಂತಾಗಿದೆ.
ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟಕ್ಕೆ ಒತ್ತಿಕೊಂಡಂತಿರುವ ಅರಣ್ಯಕ್ಕೆ ಬೆಂಕಿ ಬಿದ್ದಿದೆ. ಇದನ್ನು ಗಮನಿಸಿದ ಐಗೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ. ದಿನೇಶ್, ಗ್ರಾಮಸ್ಥರಾದ ಕಿರಣ್ ಹಾಗೂ ಬಾಬು ತಕ್ಷಣ ಅರಣ್ಯ ಇಲಾಖೆ, ಅಗ್ನಿಶಾಮಕ ಠಾಣೆ ಹಾಗೂ ಟಾಟಾ ಕಾಫಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಗ್ನಿಶಾಮಕ ಇಲಾಖೆ, ಟಾಟಾ ಕಾಫಿ ಸಂಸ್ಥೆಯ ಕಾರ್ಮಿಕರು, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರಣ್ಯಕ್ಕೆ ಬೆಂಕಿ ಹಿಡಿದ ಸಂದರ್ಭ ಮೇಲೆ ಹಾದು ಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿಗಳು ಹೊತ್ತಿ ಉರಿದಿದ್ದು, ಅಕ್ಕಪಕ್ಕದ ಕಾಫಿ ತೋಟಗಳಿಗೂ ಅಲ್ಪ ಹಾನಿಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಪೊಲೀಸ್ ಠಾಣಾಧಿಕಾರಿ ಶಿವಣ್ಣ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.