ಸೋಮವಾರಪೇಟೆ, ಮಾ. 8: ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ಜಿಲ್ಲ್ಲಾ ಪಂಚಾಯಿತಿ, ತೋಟಗಾರಿಕಾ ಇಲಾಖೆ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಕೈ ತೋಟ ಮತ್ತು ತಾರಸಿ ತೋಟದ ನಿರ್ವಹಣೆಯ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪ್ರತಿ ನಿತ್ಯ ಒಂದಲ್ಲ ಒಂದು ಜಂಜಾಟದಲ್ಲಿ ತೊಡಗಿರುವ ಮಹಿಳೆಯರಿಗೆ ಮನೆ ಅಂಗಳದಲ್ಲಿ ಬೆಳೆಯುವ ಕೈತೋಟಗಳಿಂದ ಮನೋಲ್ಲಾಸ ದೊರಕಲು ಸಾಧ್ಯ ಎಂದರು. ಕುಟುಂಬ ವ್ಯವಸ್ಥೆಯಲ್ಲಿ ಗೃಹಿಣಿಯ ಪಾತ್ರ ಮಹತ್ತರವಾದದ್ದು. ಮನೆಯ ಗೃಹಿಣಿಯಿಂದ ಮಾತ್ರ ಜೀವನದಲ್ಲಿ ಶಾಂತಿ, ನೆಮ್ಮದಿ ದೊರಕಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಮಡಿಕೇರಿ ಹಾರ್ಟಿ ಕ್ಲೀನಿಕ್‍ನ ವಿಷಯ ತಜ್ಞರಾದ ಬಿ.ಸಿ. ನಾಚಪ್ಪ ಮಾತನಾಡಿ, ಕೈ ತೋಟ ಎಂದರೆ, ಕೇವಲ ಸಸ್ಯ ಗಿಡ ಬಳ್ಳಿಗಳನ್ನು ಬೆಳೆಸುವ ತಾಣವಲ್ಲ. ದೈನಂದಿನ ಅಡುಗೆಗೆ ಬೇಕಾದ ವಿವಿಧ ಬಗೆಯ ತರಕಾರಿ, ಹಣ್ಣು-ಹಂಪಲುಗಳನ್ನು, ಔಷಧೀಯ ಗುಣಗಳನ್ನು ಹೊಂದಿರುವ ಗಿಡಗಳು ಒಳಗೊಂಡಿರುತ್ತವೆ. ರಾಸಾಯನಿಕ ಗೊಬ್ಬರಗಳನ್ನು ಬಳಸಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು, ಸಾವಯವ ಗೊಬ್ಬರವನ್ನು ಬಳಸಿ ಕೈ ತೋಟದಲ್ಲಿ ತರಕಾರಿ ಬೆಳೆದು ನಿರ್ವಹಣೆ ಮಾಡುವದು ಉತ್ತಮ ಎಂದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಕಾವ್ಯ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎಸ್. ಮುತ್ತಪ್ಪ, ಸಹಾಯಕ ನಿರ್ದೇಶಕ ಗಣೇಶ್, ಮಹಿಳಾ ಸಮಾಜದ ನಿರ್ದೇಶಕರು ಉಪಸ್ಥಿತರಿದ್ದರು.