ಕುಶಾಲನಗರ, ಮಾ. 8: ಕುಶಾಲನಗರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆಗಳಿಗೆ ತಕ್ಷಣದಿಂದಲೇ ಸರ್ಜರಿ ಮಾಡಿ ಪರಿಹಾರ ಕಂಡುಕೊಳ್ಳುವದಾಗಿ ಆರೋಗ್ಯ ಇಲಾಖಾ ಜಿಲ್ಲಾ ಅಧಿಕಾರಿ ಡಾ. ರಾಜೇಶ್ ಸುರ್ಗಿಹಳ್ಳಿ ಭರವಸೆ ನೀಡಿದ್ದಾರೆ.

ಕುಶಾಲನಗರ ಕೇಂದ್ರಕ್ಕೆ ಕಾರ್ಯನಿಮಿತ್ತ ಭೇಟಿ ನೀಡಿದ ಸಂದರ್ಭ ಸ್ಥಳೀಯ ಸುದ್ದಿಗಾರ ರೊಂದಿಗೆ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ ಕುಶಾಲನಗರ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಸ್ತಾಪನೆ, ರಕ್ತ ಸಂಗ್ರಹ ಘಟಕ ಪ್ರಾರಂಭ, ಡಯಾಲಿಸಿಸ್ ಯುನಿಟ್ ಮತ್ತು 3 ಹಾಸಿಗೆಗಳ ತುರ್ತು ನಿಗಾಘಟಕ ಸೌಲಭ್ಯಗಳನ್ನು ಕಲ್ಪಿಸುವದರೊಂದಿಗೆ ಆಸ್ಪತ್ರೆಯನ್ನು ಬಲಪಡಿಸುವ ಕೆಲಸ ಕೂಡಲೇ ಮಾಡಲಾಗುವದು.

ಕುಶಾಲನಗರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಸೇವೆ ದೊರಕದ ದೂರು ಹಿನ್ನೆಲೆ ಜನರಿಗೆ ನಂಬಿಕೆ ಬರುವ ರೀತಿಯಲ್ಲಿ ಉತ್ತಮ ಸೇವಾ ಮನೋಭಾವನೆಯೊಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಸ್ಥಳದಲ್ಲಿದ್ದ ವೈದ್ಯಾಧಿಕಾರಿ ಡಾ. ಕೀರ್ತಿರಾಜ್ ಅವರಿಗೆ ನಿರ್ದೇಶನ ನೀಡಿದ ಡಿಹೆಚ್‍ಓ, ಪ್ರತಿಯೊಬ್ಬ ರೋಗಿಗಳಿಗೆ ಉಚಿತ ಔಷಧಿ ವಿತರಣೆ ಮಾಡುವಂತೆ ಸೂಚಿಸಿದರು.

ರಕ್ತ ಪರೀಕ್ಷೆ ಇನ್ನಿತರ ವ್ಯವಸ್ಥೆಗಳಿಗೆ ರೋಗಿಗಳನ್ನು ಖಾಸಗಿ ಆರೋಗ್ಯ ಘಟಕಗಳಿಗೆ ಶಿಫಾರಸ್ಸು ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವೈದ್ಯರುಗಳಿಗೆ ಸಲಹೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಕುಶಾಲನಗರ ಆಸ್ಪತ್ರೆಗೆ ದಾಖಲಾಗುವ ಯಾವದೇ ರೋಗಿಗಳನ್ನು ವಿನಾಕಾರಣ ದೊಡ್ಡಾಸ್ಪತ್ರೆಗಳಿಗೆ ಶಿಫಾರಸ್ಸು ಮಾಡದಂತೆ ವೈದ್ಯರುಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಯ ರಕ್ಷಾ ಸಮಿತಿಯ ಅನುದಾನ ಬಳಸಿ ರೋಗಿಗಳಿಗೆ ಬೇಕಾಗುವ ತುರ್ತು ಸೌಲಭ್ಯಗಳನ್ನು ಕಲ್ಪಿಸಲು ಸಧ್ಯದಲ್ಲಿಯೇ ಸಭೆ ಕರೆಯಲಾಗುವದು.

ಆಸ್ಪತ್ರೆಗೆ ಅವಶ್ಯವಿರುವ ಔಷಧಿಗಳು ಉಚಿತವಾಗಿ ಲಭ್ಯವಾಗುತ್ತಿದ್ದು ಸರಕಾರಿ ಆಸ್ಪತ್ರೆಗಳಿಗೆ ಅನುದಾನದ ಕೊರತೆ ಇರುವದಿಲ್ಲ ಎಂದರು.

ಪ್ರಾಥಮಿಕ ಕೇಂದ್ರಗಳಿಗೆ ರೂ. 50 ಸಾವಿರ, ಸಮುದಾಯ ಕೇಂದ್ರಗಳಿಗೆ ರೂ. 3 ಲಕ್ಷ, ತಾಲೂಕು ಮಟ್ಟದ ಆಸ್ಪತ್ರೆಗಳಿಗೆ ರೂ. 5 ಲಕ್ಷ ವಿಶೇಷ ಅನುದಾನವನ್ನು ಸರಕಾರ ಕಲ್ಪಿಸಿದೆ. ಇದರ ಸದುಪಯೋಗವನ್ನು ನಾಗರಿಕರಿಗೆ ನೀಡುವದು ಇಲಾಖೆಯ ಆದ್ಯ ಕರ್ತವ್ಯವಾಗಿದೆ ಎಂದರು.

ಸೋಮವಾರಪೇಟೆ ತಾಲೂಕಿನ ಕುಶಾಲನಗರ ಮತ್ತು ಸೋಮವಾರಪೇಟೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶ ಹೊಂದಲಾಗಿದೆ ಎಂದ ರಾಜೇಶ್, ಜಿಲ್ಲೆಯಲ್ಲಿ ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಕೊರತೆ ಇರುವದಾಗಿ ತಿಳಿಸಿದರು.

ಕುಶಾಲನಗರ ಆಸ್ಪತ್ರೆಗೆ ಅವಶ್ಯವಿರುವ ಮಕ್ಕಳ ತಜ್ಞರು, ಅರೆವಳಿಕೆ ತಜ್ಞ ವೈದ್ಯರ ನೇಮಕ ಸಧ್ಯದಲ್ಲಿಯೇ ಮಾಡಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭ ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್, ಸ್ಥಳೀಯ ವೈದ್ಯಾಧಿಕಾರಿ ಡಾ. ಕೀರ್ತಿರಾಜು ಇದ್ದರು.

ಇದೇ ಸಂದರ್ಭ ಆರೋಗ್ಯಾಧಿಕಾರಿ ಡಾ. ರಾಜೇಶ್ ಆಸ್ಪತ್ರೆಯ ಒಳರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ರೋಗಿಗಳ ಕ್ಷೇಮ ಸಮಾಚಾರ ವಿಚಾರಿಸುವದರೊಂದಿಗೆ ಆಸ್ಪತ್ರೆಯ ವಸ್ತುಸ್ಥಿತಿ ಬಗ್ಗೆ ಗಮನಹರಿಸಿದರು.