ಒಡೆಯನಪುರ, ಮಾ. 8: ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಸುಳುಗಳಲೆ ಕಾಲೋನಿಯಲ್ಲಿ 20 ವರ್ಷಗಳ ಹಿಂದೆ ನಿರ್ಮಿಸಿ ಅರ್ಧಕ್ಕೆ ನಿಂತಿದ್ದ ಇದೀಗ ಪೂರ್ಣ ಗೊಂಡಿರುವ ಸಮುದಾಯ ಭವನವನ್ನು ಮಾಜಿ ಸಚಿವ ಜೀವಿಜಯ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಕೆಲವರು ಸಮಾನತೆಯಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು. ಬಡವರು, ದೀನ ದಲಿತರ ಶ್ರೇಯೋಭಿವೃದ್ಧಿಗಾಗಿ ಸರಕಾರ ಹಮ್ಮಿಕೊಂಡಿರುವ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸರಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್ ಮಾತನಾಡಿ, ಸಮುದಾಯ ಭವನ ಕೇವಲ ಒಂದು ಜಾತಿ ಜನಾಂಗಕ್ಕೆ ಮೀಸಲಾಗಿರುವದಿಲ್ಲ, ಸಮಾಜ ದಲ್ಲಿರುವ ಪ್ರತಿಯೊಂದು ಸಮುದಾ ಯದವರು ಇದರ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.

ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ಸಮುದಾಯ ಭವನಕ್ಕೆ ಹೆಚ್ಚುವರಿ ಕೊಠಡಿ ಹಾಗೂ ತಡೆಗೋಡೆ ನಿರ್ಮಾಣದ ಅಗತ್ಯ ಇದೆ, ಈ ನಿಟ್ಟಿನಲ್ಲಿ ಜಿ.ಪಂ. ಹಾಗೂ ತಾ.ಪಂ. ಸದಸ್ಯರುಗಳು ಅನುದಾನ ನೀಡುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ತಾ.ಪಂ. ಸದಸ್ಯ ಅನಂತ್‍ಕುಮಾರ್, ಮಾಜಿ ಗ್ರಾ.ಪಂ. ಅಧ್ಯಕ್ಷೆ ಸುಮತಿ ಸತೀಶ್ ಮಾತನಾಡಿದರು. ಜಿ.ಪಂ. ಸದಸ್ಯೆ ಸರೋಜಮ್ಮ, ಗ್ರಾ.ಪಂ. ಉಪಾಧ್ಯಕ್ಷೆ ರೂಪ, ಮಾಜಿ ತಾ.ಪಂ. ಸದಸ್ಯೆ ಸವಿತ ಸತೀಶ್, ಪಿಡಿಓ ವೇಣುಗೋಪಾಲ್ ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.

- ವಿ.ಸಿ. ಸುರೇಶ್ ಒಡೆಯನಪುರ