ಮಡಿಕೇರಿ, ಮಾ. 8: ಮಡಿಕೇರಿ ನಗರಸಭೆ ವ್ಯಾಪ್ತಿಯ ಇಂದಿರಾ ನಗರದ 14ನೇ ಬ್ಲಾಕ್‍ನಲ್ಲಿ ರಾಜಕಾರಣಿಯೊಬ್ಬರು ಕಾನೂನಿಗೆ ವಿರುದ್ಧವಾಗಿ 3.6 ಎಕರೆಗೂ ಅಧಿಕ ಜಮೀನನ್ನು ಹೊಂದಿದ್ದಾರೆ ಎಂದು ಆರೋಪಿಸಿ ಪ್ಯೂಪಲ್ ಮೂವ್‍ಮೆಂಟ್ ಫಾರ್ ಹ್ಯೂಮನ್‍ರೈಟ್ಸ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. 1998-99ನೇ ಇಸವಿಯಲ್ಲಿ ನಗರಸಭೆಯಲ್ಲಿ ಅಧಿಕಾರದಲ್ಲಿದ್ದ ಸಂದರ್ಭ ಈ ಜಾಗ ರಾಜಕಾರಣಿಯ ವಶವಾಗಿದ್ದು, ಜಾಗವನ್ನು ಸರಕಾರ ಇಲ್ಲಿಯವರೆಗೆ ದುರಸ್ತಿ ಮಾಡಿ ಕೊಟ್ಟಿರುವದಿಲ್ಲ ಮತ್ತು ಈ ಜಾಗದಲ್ಲಿ ಯಾವದೇ ಕೃಷಿಯನ್ನು ಮಾಡಿರುವದಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಹರೀಶ್ ಜಿ. ಆಚಾರ್ಯ ಪ್ರತಿಭಟನೆ ಸಂದರ್ಭ ಆರೋಪಿಸಿದರು. ಒಂದು ವೇಳೆ ಕೃಷಿಗಾಗಿ ಜಮೀನು ನೀಡಿದರೂ ನಗರಸಭೆಯ ಅಧೀನದಲ್ಲಿರುವ ಜಾಗವನ್ನು ನೀಡಿರುವದು ತಪ್ಪು ಎಂದು ವಾದಿಸಿದ ಅವರು ನಗರದಲ್ಲಿರುವ ನಿರಾಶ್ರಿತರಿಗೆ ನಿವೇಶನವನ್ನು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು. ಸುಮಾರು 3.6 ಎಕರೆ ಜಮೀನನ್ನು ಯಾವ ಮಾನದಂಡದಡಿಯಲ್ಲಿ ರಾಜಕಾರಣಿಗೆ ನೀಡಲಾಗಿದೆ ಎಂದು ಪ್ರಶ್ನಿಸಿದ ಅವರು, ತಕ್ಷಣ ಸರಕಾರ ಮಧ್ಯ ಪ್ರವೇಶಿಸಿ ಕಾನೂನು ಬಾಹಿರವಾಗಿ ಹೊಂದಿರುವ ಜಾಗವನ್ನು ವಶಪಡಿಸಿಕೊಂಡು ತಲಾ ಮೂರು ಸೆಂಟ್‍ನಂತೆ ಬಡವರಿಗೆ ಹಂಚಬೇಕೆಂದು ಆಗ್ರಹಿಸಿದರು. ನಂತರ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ನಂಜುಂಡೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರಮುಖರಾದ ಎ.ವಿ. ಮುರಳೀಧರ್, ಬಿ.ಎಂ. ಹರೀಶ್, ಎಸ್.ವಿ. ಸುರೇಶ್, ಸತೀಶ್ ಆಚಾರ್ಯ, ವಿಶ್ವ, ಎಂ.ಹೆಚ್. ನೌಶಾದ್, ಮಹಮ್ಮದ್ ಅಬ್ರಹಾರ್, ಶಾಫಿಇ, ಇಬ್ರಾಹಿಂ, ಹಾರೂನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.