ಸಿದ್ದಾಪುರ, ಮಾ. 8: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪಟ್ಟಣದಲ್ಲಿ ಕಸ ವಿಲೇವಾರಿ ಮಾಡದಂತೆ ವಿರೋಧ ಪಕ್ಷದ ಸದಸ್ಯರುಗಳು ವಿರೋಧ ವ್ಯಕ್ತಪಡಿಸಿ ರಾಜೀನಾಮೆ ನೀಡಲು ಮುಂದಾದ ಘಟನೆ ನಡೆಯಿತು.
ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ ಅಧ್ಯಕ್ಷೆತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ಸದಸ್ಯರು, ಪಟ್ಟಣದ ಹಸಿ ಮೀನು ಮಾರಾಟ ಮಳಿಗೆಗಳ ಬಳಿ ನೆಲ್ಲಿಹುದಿಕೇರಿ ಪಟ್ಟಣದ ಕಸ ತ್ಯಾಜ್ಯಗಳನ್ನು ದಿನನಿತ್ಯ ವಿಲೇವಾರಿ ಮಾಡುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಈ ಬಗ್ಗೆ ಸಾರ್ವಜನಿಕರು, ಸದಸ್ಯರುಗಳ ಬಳಿ ಪ್ರಶ್ನಿಸುತ್ತಿದ್ದಾರೆ. ಈ ಹಿನ್ನೆಲೆ ಸಾಕಷ್ಟು ಬಾರಿ ಗ್ರಾ.ಪಂ.ಯಲ್ಲಿ ಪ್ರಸ್ತಾಪಿಸಿದ್ದರೂ ಕಸ ವಿಲೇವಾರಿ ಮಾಡುವ ಜಾಗದ ಸಮೀಪದಲ್ಲೇ ಹಸಿ ಮೀನು ಮಾರಾಟಕ್ಕೆ ಅವಕಾಶ ನೀಡುತ್ತಿರುವದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಂಡು ಪಟ್ಟಣದಲ್ಲಿ ಕಸ ವಿಲೇವಾರಿ ಮಾಡದಂತೆ ನಿರ್ಣಯ ಕೈಗೊಳ್ಳಲಾಯಿತು. ಈತನ್ಮಧ್ಯೆ ಸದಸ್ಯರೋರ್ವರು ಮಾತನಾಡಿ ಅಧ್ಯಕ್ಷರು ದೌರ್ಬಲ್ಯವನ್ನು ಬಳಸಿಕೊಂಡು ಕೆಲವು ಸದಸ್ಯರು ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ದೂರಿದ್ದರಿಂದ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ಆದರೆ ಬರಡಿಯ ಸದಸ್ಯರೊಬ್ಬರು ಪಂಚಾಯಿತಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗೊಂಡು ನೀಡಿದ ರಾಜೀನಾಮೆ ಪತ್ರವನ್ನು ಅಂಗೀಕರಿಸದೇ ಚರ್ಚೆಯ ಮೂಲಕ ಇತ್ಯರ್ಥ ಪಡಿಸಲಾಯಿತು.
ಏನೇ ಚರ್ಚೆಗಳು ಪರಸ್ಪರ ಆರೋಪ ಪ್ರತ್ಯರೋಪಗಳು ನಡೆದರೂ ಕೂಡ ಆಡಳಿತ ಪಕ್ಷದ ಸದಸ್ಯರುಗಳು ಹಾಗೂ ವಿರೋಧ ಪಕ್ಷದ ಸದಸ್ಯರುಗಳು ಕಸ ವಿಲೇವಾರಿಗೆ ಸೂಕ್ತ ಜಾಗವನ್ನು ಕಂಡುಹಿಡಿಯದೇ ನೆಲ್ಲಿಹುದಿಕೇರಿ ಪಟ್ಟಣವು ಗಬ್ಬೆದು ನಾರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.