ಸಿದ್ದಾಪುರ, ಮಾ: 8: ಹುಲಿ ಧಾಳಿಗೆ ಸಿಲುಕಿ ಹಸು ಕಳೆದುಕೊಂಡ ಶಂಕರಕುಟ್ಟಿ ಅವರಿಗೆ ಸಂಕೇತ್ ಪೂವಯ್ಯ ಸಹಾಯ ಧನ ನೀಡಿ ಮಾನವಿಯತೆ ಮೆರೆದಿದ್ದಾರೆ.

ಮಾಲ್ದಾರೆಯ ಚೊಟ್ಟೆಪಾಳಿಯ ನಿವಾಸಿಯಾಗಿರುವ ಶಂಕರಕುಟ್ಟಿ ಎಂಬವರಿಗೆ ಸೇರಿದ ಹಾಲು ಕರೆಯುವ ಹಸುವೊಂದನ್ನು ಕಳೆದ 2 ದಿನಗಳ ಹಿಂದೆ ಹುಲಿ ಧಾಳಿಗೆ ಬಲಿಯಾಗಿದೆ. ಈ ಹಿನ್ನೆಲೆ ಹಸುವನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿರುವ ಶಂಕರಕುಟ್ಟಿಯ ಸಮಸ್ಯೆಯನ್ನು ಅರಿತು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಶಂಕರಕುಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ವೈಯುಕ್ತಿಕವಾಗಿ ರೂ. 10,000 ನೀಡಿದರು.

ಇದೇ ಸಂದರ್ಭ ಹಸು ಕಳೆದುಕೊಂಡ ಶಂಕರಕುಟ್ಟಿ ಹಾಗೂ ಅವರ ಪತ್ನಿ ರುಕ್ಮಣಿ ಅವರು ತಾವು ಕಷ್ಟದಲ್ಲಿರುವ ಸಂದರ್ಭದಲ್ಲಿ ತಮ್ಮ ಸಮಸ್ಯೆಗೆ ಸ್ಪಂದಿಸಿದ ಸಂಕೇತ್ ಪೂವಯ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾರು ಕೂಡ ಜನಪ್ರತಿನಿಧಿಗಳು ಬಾರದಿದ್ದರೂ ನಮ್ಮಂತಹ ಕಡು ಬಡವರಿಗೆ ಕೂಡಲೇ ಸ್ಪಂದಿಸಿರುವದು ಸಂಕೇತ್ ಅವರ ಉತ್ತಮ ಕಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ನಿರ್ಲಕ್ಷ್ಯ ಹಾಗೂ ಸರ್ಕಾರದ ಕಾರ್ಯವೈಖರಿ ಯನ್ನು ಖಂಡಿಸಿ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಶಂಕರಕುಟ್ಟಿ ಮನೆಯ ಸಮೀಪದಲ್ಲಿ ಜೆ.ಡಿ.ಎಸ್. ಕಾರ್ಯ ಕರ್ತರು ಸೇರಿ ಸರ್ಕಾರದ ವಿರುದ್ಧ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಧಿಕ್ಕಾರದ ಘೋಷಣೆಯನ್ನು ಕೂಗಿ ಪ್ರತಿಭಟಿಸಿದರು. ಅಲ್ಲದೇ ಸೂಕ್ತ ರೀತಿಯ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದರು.

ಇದೇ ಸಂದರ್ಭ ಜೆ.ಡಿ.ಎಸ್. ವಿಧಾನಸಭಾ ಕ್ಷೇತ್ರ ಸಮಿತಿಯ ಹಾಗೂ ಹೋಬಳಿ ಸಮಿತಿಯ ಹಾಗೂ ಸ್ಥಾನೀಯ ಸಮಿತಿಯ ಪದಾಧಿಕಾರಿ ಗಳು, ಮುಖಂಡರುಗಳು ಹಾಜರಿದ್ದರು.