ಮಡಿಕೇರಿ, ಮಾ. 8: ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಇತ್ತೀಚೆಗೆ ಜರುಗಿದ ಶಿಕ್ಷಣ ಸಂಸ್ಥೆಗಳ ಕಾರ್ಯಚಟುವಟಿಕೆ ವಿವರ ಈ ಕೆಳಗಿನಂತಿದೆ.ಅಂಗನವಾಡಿ ಕಟ್ಟಡ ಲೋಕಾರ್ಪಣೆ
ಒಡೆಯನಪುರ: ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವದನ್ನು ತಮ್ಮ ಗುರಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಎಡಹಳ್ಳಿ ಗ್ರಾಮದಲ್ಲಿ ರೂ. 9 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಂಗವಾಡಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬ ಪೋಷಕರು ತಮ್ಮ ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಸರಕಾರ ಅಂಗನವಾಡಿ ಮಕ್ಕಳ ಸರ್ವತ್ತೋಮುಖ ಅಭಿವೃದ್ಧಿಗಾಗಿ ಬಿಸಿಯೂಟ, ಆರೋಗ್ಯ ಸೇವೆ ಮುಂತಾದ ಸೇವೆಗಳನ್ನು ಒದಗಿಸಿಕೊಡುತ್ತಿದೆ. ಇವುಗಳನ್ನು ಪೋಷಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳಿದ್ದರೂ ಅವುಗಳಿಗೆ ಸ್ವಂತ ಕಟ್ಟಡಗಳಿರುವದಿಲ್ಲ. ಇಂತಹ ಸಮಸ್ಯೆಯನ್ನು ದೂರ ಮಾಡುವ ಸದುದ್ದೇಶದಿಂದ ಸರಕಾರದ ಅನುದಾನದಿಂದ ನೂತನ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದರು.
ಸಮಾರಂಭದಲ್ಲಿ ಜಿ.ಪಂ. ಸದಸ್ಯೆ ಸರೋಜಮ್ಮ, ತಾಲೂಕು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿ ಶೀಲ, ಗ್ರಾ.ಪಂ. ಪಿಡಿಓ ವೇಣುಗೋಪಾಲ್, ಮಾಜಿ ತಾ.ಪಂ. ಸದಸ್ಯೆ ಸವಿತಾ ಸತೀಶ್ ಹಾಗೂ ಗ್ರಾ.ಪಂ. ಸದಸ್ಯರು ಹಾಜರಿದ್ದರು.
ಸ್ಥಾಯಿ ಸಮಿತಿ ಅಧ್ಯಕ್ಷ ಭೇಟಿ
ಮೂರ್ನಾಡು: ಇಲ್ಲಿನ ಸರಕಾರಿ ಪ್ರೌಢಶಾಲೆಗೆ ಕೊಡಗು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಹತ್ತನೇ ತರಗತಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದೊಂದಿಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದರೆ ಮುಂದೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಶಾಲಾ ಪ್ರಬಾರ ಮುಖ್ಯ ಶಿಕ್ಷಕಿ ದೇಚಮ್ಮ, ದಾನಿಗಳಾದ ಪಳಂಗಂಡ ಲವಕುಮಾರ್, ಸುರೇಶ್ ಮುತ್ತಪ್ಪ, ಶಾಲಾ ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಶೇಕ್ ಅಹಮ್ಮದ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ ಪೂವಪ್ಪ, ಪುದಿಯೊಕ್ಕಡ ರಮೇಶ್ ಹಾಜರಿದ್ದರು.
ಚೆಶೈರ್ ಶಾಲಾ ವಾರ್ಷಿಕೋತ್ಸವ
ಗೋಣಿಕೊಪ್ಪ ವರದಿ: ವಿಶೇಷಚೇತನ ಮಕ್ಕಳನ್ನು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮಟ್ಟಿಗೆ ತರಬೇತಿ ನೀಡುವ ಕಾರ್ಯದಲ್ಲಿ ಶಿಕ್ಷಕರ ಶ್ರಮ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅಭಿಪ್ರಾಯಪಟ್ಟರು.
ಪಾಲಿಬೆಟ್ಟ ಚೆಶೈರ್ ಹೋಮ್ಸ್ ವಿಶೇಷಚೇತನ ಮಕ್ಕಳ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮವನ್ನು ವೀಕ್ಷಿಸಿ ವಿಶೇಷಚೇತನ ಮಕ್ಕಳಲ್ಲಿಯೂ ಪ್ರತಿಭೆ ಅಡಗಿದೆ ಎಂಬದು ಮನದಟ್ಟಾಗಿದೆ ಎಂದು ಹೇಳಿದರು.
ಚೆಶೈರ್ ಹೋಮ್ಸ್ ಸಂಸ್ಥೆಯ ಕಾರ್ಯದರ್ಶಿ ಆಶಾ ಸುಬ್ಬಯ್ಯ ಮಾತನಾಡಿ, ವಿಶೇಷಚೇತನ ಮಕ್ಕಳನ್ನು ಪ್ರೀತಿ ವಾತ್ಸಲ್ಯದಿಂದ ಜವಾಬ್ದಾರಿ ಹೊತ್ತಿರುವ ಶಿಕ್ಷಕ ವೃಂದ ಹಾಗೂ ಸ್ವಯಂ ಸೇವಕರ ಕಾರ್ಯ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಸಂಸ್ಥೆಯ ಸ್ಥಾಪನೆಗಾಗಿ ಶ್ರಮಿಸಿದ ಸಿ.ಎ. ಮುತ್ತಣ್ಣ ಅವರನ್ನು ಗೌರವಿಸಲಾಯಿತು. ಸನ್ಮಾನಿತರಾಗಿ ಮಾತನಾಡಿದ ಅವರು, ಸಂಸ್ಥೆಯ ಸ್ಥಾಪನೆಗೆ ಸಹಕರಿಸಿದ ಜಿಲ್ಲೆಯ ಲಯನ್ಸ್ ಸಂಸ್ಥೆ ಹಾಗೂ ದಾನಿಗಳ ದೂರದೃಷ್ಟಿಯಿಂದ ವಿಶೇಷಚೇತನ ಮಕ್ಕಳಿಗೆ ಮಾತ್ರ ಮೀಸಲಾಗಿರುವ ಸುಸಜ್ಜಿತ ಶಾಲೆ ನೆಲೆನಿಂತಿದೆ ಎಂದು ಹೇಳಿದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೋಷಕರ ಹಾಗೂ ಪ್ರೇಕ್ಷಕರ ಮನ ತಣಿಸಿದ ಮಕ್ಕಳು ನೃತ್ಯ, ನಾಟಕ ಹಾಗೂ ಮಿಮಿಕ್ರಿ ಮೂಲಕ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಗೀತಾ ಚೆಂಗಪ್ಪ, ಉಪಾಧ್ಯಕ್ಷೆ ಪುನೀತ ರಾಮಸ್ವಾಮಿ, ಮಾಜಿ ಉಪಾಧ್ಯಕ್ಷ ಎ.ಸಿ. ಗಣಪತಿ, ಸಮಾಜ ಸೇವಕ ಕೆ.ಪಿ. ಉತ್ತಪ್ಪ, ಪ್ರಾಂಶುಪಾಲ ಶಿವಕುಮಾರ್ ಇದ್ದರು.
ಪ್ರತಿಭಾನ್ವೇಷಣೆ ವಿದ್ಯಾರ್ಥಿನಿ ಆಯ್ಕೆ
ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಎಂ.ಎಂ. ನೇಹಾ ಸುರತ್ಕಲ್‍ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಇಲ್ಲಿ ಆಯೋಜಿಸಲಾಗಿರುವ ‘ಭೌತಶಾಸ್ತ್ರ ತರಬೇತಿ ಮತ್ತು ಪ್ರತಿಭಾನ್ವೇಷಣೆ-2018’ ಕಾರ್ಯಾಗಾರದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ತರಬೇತಿಗೆ ಭಾರತಾದ್ಯಂತ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಕೊಡಗಿನಿಂದ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ. ತರಬೇತಿಯು ಮೇ 21 ರಿಂದ ಜೂನ್ 10 ರವರೆಗೆ ನಡೆಯಲಿದೆ. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ವಿ. ಕುಸುಮಾಧರ್ ವಿದ್ಯಾರ್ಥಿನಿಗೆ ತರಬೇತಿ ನೀಡಿದ್ದಾರೆ ಎಂದು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.ಫೆಸ್ಟ್‍ಗೆ ವರ್ಣರಂಜಿತ ತೆರೆ
ಮಡಿಕೇರಿ: ಸಾಯಿಶಂಕರ ಕಾಲೇಜಿನಲ್ಲಿ ತಾ. 3 ರಂದು ಆಯೋಜಿಸಿದ್ದ 2018ನೇ ಸಾಲಿನ ಜ್ಹೀಲ್-2018 ಫೆಸ್ಟ್ ವರ್ಣರಂಜಿತವಾಗಿ ಸಮಾರೋಪಗೊಂಡಿತು.
ಜಿಲ್ಲಾಮಟ್ಟದ ಪದವಿ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕಾಲ್ಚೆಂಡು ಮತ್ತು ಥ್ರೋಬಾಲ್ ಪಂದ್ಯಾಟದ ಮೂಲಕ ಆರಂಭವಾದ ಈ ಸಮಾರಂಭ, ಟ್ರಸ್ಸರ್ ಹಂಟ್, ರಂಗೋಲಿ, ಮೆಹೆಂದಿ, ಕೇಶಾಲಂಕಾರ, ವಾಲಗ ಕುಣಿತ, ಆಟೋ ಶೋ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಸಾಗಿ ಸಮಾಪನ ಗೊಂಡಿತು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಮೊದಲಬಾರಿಗೆ ಆಯೋಜಿತಗೊಂಡ ‘ರ್ಯಾಂಪ್‍ವಾಕ್’ನಲ್ಲಿ ಸಂಭ್ರಮದಿಂದ ಪಾಲ್ಗೊಂಡು ದೇಶದ ವಿವಿಧ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಉಡುಗೆ, ಅಲಂಕಾರಗಳನ್ನು ಪ್ರದರ್ಶಿಸಿದರು.
ರಾತ್ರಿ 7 ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿ.ಜೆ.ಪಿ. ಯುವ ಘಟಕ, ಮೈಸೂರು ಅಧ್ಯಕ್ಷ ಬಿ.ಪಿ. ಮಂಜುನಾಥ್ ಮತ್ತು ಮಾಜಿ ಶಾಸಕ ಅರುಣ್ ಮಾಚಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ವೇದಿಕೆಯಲ್ಲಿ ಮಹಾಲಕ್ಷ್ಮಿ ಸ್ವೀಟ್ಸ್‍ನ ಮಾಲೀಕರಾದ ಶಿವಕುಮಾರ್, ಸಂಸ್ಥೆಯ ಅಧ್ಯಕ್ಷರಾದ ಕೋಳೇರ ಝರು ಗಣಪತಿ, ನಿರ್ದೇಶಕಿ ಗ್ರೀಟಾ ಅಪ್ಪಣ್ಣ, ಪದವಿ ಕಾಲೇಜಿನ ಪ್ರಾಂಶುಪಾಲ ಬೀರೇಗೌಡ, ಬಿ.ಎಡ್ ವಿಭಾಗದ ಪ್ರಾಂಶುಪಾಲ ನಾರಾಯಣ, ಸಲಹಾ ಸಮಿತಿ ಸದಸ್ಯ ಅರಮಾಣಮಾಡ ಸತೀಶ್ ಮೊದಲಾದವರು ಉಪಸ್ಥಿತರಿದ್ದರು.
ಸ್ಪರ್ಧಾ ಕಾರ್ಯಕ್ರಮ
ವೀರಾಜಪೇಟೆ: ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಮತ್ತು ಸಮಾಜದ ಮುಂದುವರಿಕೆಗಾಗಿ ಪುಸ್ತಕ ಸಂಸ್ಕøತಿಯನ್ನು ಪೋಷಿಸಬೇಕಾದ ಅನಿವಾರ್ಯತೆ ಇದೆ ಎಂದು ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕøತ ಸ್ಮಿತಾ ಅಮೃತರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಅಯೋಜಿಸಲಾಗಿದ್ದ ‘ನನ್ನ ಮೆಚ್ಚಿನ ಪುಸ್ತಕ,ವಿದಾರ್ಥಿಗಳ ಅಭಿಪ್ರಾಯ ಮಂಡನೆ’ ಎಂಬ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದ ಅವರು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಸಮೂಹ ಆಧುನಿಕತೆಯ ಹೆಸರಿನಲ್ಲಿ ಮೊಬೈಲ್ ಸಂಸ್ಕøತಿಯ ಮೊರೆ ಹೋಗುವದರೊಂದಿಗೆ ಜೀವನ ಹಾಳು ಮಾಡಿಕೊಳ್ಳುತ್ತಿರುವದಾಗಿ ವಿಷಾದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಮಾನವೀಯ ಮೌಲ್ಯಗಳಿಗೆ ವಿದ್ಯಾರ್ಥಿಗಳು ಒತ್ತು ನೀಡಬೇಕು. ತಮ್ಮ ಪೋಷಕರು ತಮಗಾಗಿ ಮೀಸಲಿರಿಸಿದ್ದ ಬದುಕು ಮತ್ತು ಸಮಯವನ್ನು ನೆನಪಿಸಿಕೊಳ್ಳುವ ಮೂಲಕ ಸಾಧನೆಯ ಗುರಿ ತಲಪುವಂತಾಗಬೇಕು ಎಂದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಿ.ಕೆ. ಉಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ. ಆರ್. ರಘುರಾಜು ಸ್ವಾಗತಿಸಿ, ಮಧುರಾ ನಿರೂಪಿಸಿದರೆ. ಧರ್ಮಶೀಲಾ ವಂದಿಸಿದರು.
ಬೇಗೂರು ಶಾಲೆಗೆ ಪ್ರಶಸ್ತಿ
ಗೋಣಿಕೊಪ್ಪಲು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ನೀಡಲಾಗುವ ವಾರ್ಷಿಕ ಹಸಿರು ಶಾಲಾ ಪ್ರಶಸ್ತಿಗೆ ಬೇಗೂರುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭಾಜನವಾಗಿದೆ.
ಶಾಲೆಯ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಾಜಿ ಹಾಗೂ ವೈವಿದ್ಯಮಯ ಪರಿಸರ ಚಟುವಟಿಕೆಗಳನ್ನು ನಡೆಸುತ್ತ ಬಂದಿರುವ ಹಿನ್ನೆಲೆ ಮಡಿಕೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಾಲಾ ಮುಖ್ಯ ಶಿಕ್ಷಕಿ ಸುಜಾತ ಹಾಗೂ ಶಾಲಾ ಇಕೋ ಕ್ಲಬ್‍ನ ಶಿಕ್ಷಕಿ ಅನಿತಾ ಕುಮಾರಿ ಪ್ರಶಸ್ತಿ ಸ್ವೀಕರಿಸಿದರು.ಕರಾಟೆಯಲ್ಲಿ ತೇರ್ಗಡೆ
ಗೋಣಿಕೊಪ್ಪ ವರದಿ: ಜೆನ್ ಶಿಟಾರಿಯೋ ಕೊಡಗು ಕರಾಟೆ ಶಾಲೆ ವತಿಯಿಂದ ವಿತರಿಸುವ ವಿವಿಧ ಶ್ರೇಣಿಯ ಬೆಲ್ಟ್ ಪರೀಕ್ಷೆಯಲ್ಲಿ ಸುಮಾರು 170 ಕ್ರೀಡಾಪಟುಗಳು ತೇರ್ಗಡೆಯಾದರು.
ಇಲ್ಲಿನ ಲಯನ್ಸ್ ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ 20 ಕ್ರೀಡಾಪಟುಗಳಿಗೆ ಬ್ಲ್ಯಾಕ್ ಬೆಲ್ಟ್, 150 ಕ್ರೀಡಾಪಟುಗಳು ಕಲರ್ ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಈ ಸಂದರ್ಭ ಶಾಲೆಯ ಮುಖ್ಯ ತರಬೇತುದಾರ ಚೆಪ್ಪುಡೀರ ಅರುಣ್ ಮಾಚಯ್ಯ, ತರಬೇತುದಾರರುಗಳಾದ ಪ್ರಸಾದ್ ದೇವಯ್ಯ ಹಾಗೂ ಜಮ್ಮಡ ಜೋಯಪ್ಪ ಉಪಸ್ಥಿತರಿದ್ದರು.
‘ಲುಮಿನೆನ್ಸ್ 2018-ಫೆಸ್ಟ್’
ವೀರಾಜಪೇಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘದ ವತಿಯಿಂದ ಅಂತರ ಕಾಲೇಜು ಮಟ್ಟದ 2 ದಿನದ ‘ಲುಮಿನೆನ್ಸ್ 2018 - ಫೆಸ್ಟ್’ ಕಾರ್ಯಕ್ರಮವನ್ನು ಚಿಕ್ಕಪೇಟೆಯಲ್ಲಿರುವ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಆವರಣದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಒಟ್ಟು 16 ತಂಡಗಳು 10 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದರು. ಇದರಲ್ಲಿ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ತಂಡ ಪ್ರಥಮ, ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿಯನ್ನು ಹಾಗೂ ಅನುಗ್ರಹ ಪ್ರಥಮ ದರ್ಜೆ ಕಾಲೇಜು ಕುಶಾಲನಗರ ತಂಡ ದ್ವಿತೀಯ ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿಯನ್ನು ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಕೃಷ್ಣಾನಂದ ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ವಿತರಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ, ಸಹಾಯಕ ಪ್ರಾಧ್ಯಾಪಕರುಗಳಾದ ವೇಣುಗೋಪಾಲ್, ಸುನಿತ, ಆರ್. ಮಂಜುನಾಥ್, ಫೆಸ್ಟ್‍ನ ವಿದ್ಯಾರ್ಥಿ ಪ್ರತಿನಿಧಿಗಳಾದ ರುಚಿತ್ ಕುಮಾರ್ ಮತ್ತು ಶಫೀಕ್ ಉಪಸ್ಥಿತರಿದ್ದರು.
ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ
ಗೋಣಿಕೊಪ್ಪ ವರದಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈಸೂರು ವಲಯ ಅಂತರ್ ಕಾಲೇಜುಗಳ ವಾಲಿಬಾಲ್ ಟೂರ್ನಿಯಲ್ಲಿ 5 ತಂಡಗಳು ಗೆಲುವು ಪಡೆದು ಕೊಂಡಿದೆ. ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸಹ ಯೋಗದಲ್ಲಿ ನಡೆದ ಟೂರ್ನಿಯಲ್ಲಿ ಮೈಸೂರು ವಿವಿಐಟಿ, ತಾಂಡವಪುರ ಎಂಐಟಿ, ಮೈಸೂರು ಎಂಐಟಿ, ಮೈಸೂರು ಎಸ್‍ಜೆಸಿಇ ಹಾಗೂ ಮೈಸೂರು ವಿವಿಐಇಟಿ ತಂಡಗಳು ಜಯ ಸಾಧಿಸಿದವು.
ಮೈಸೂರು ವಿವಿಐಇಟಿ ತಂಡವು ಮೈಸೂರು ಎಂವೈಸಿಇಎಂ ತಂಡವನ್ನು ಮಣಿಸಿತು. ತಾಂಡವಪುರ ಎಂಐಟಿ ತಂಡವು ಮಂಡ್ಯ ಎಂಆರ್‍ಐಟಿ ತಂಡದ ವಿರುದ್ಧ ಜಯಗಳಿಸಿತು. ಮೈಸೂರು ಎಂಐಟಿ ತಂಡವು ಚಾಮರಾಜನಗರ ಜಿಇಸಿ ತಂಡವನ್ನು ಸೋಲಿಸಿತು. ಮೈಸೂರು ಎಸ್‍ಜೆಸಿಇ ತಂಡವು ರಾಮನಗರ ಜಿಇಸಿ ತಂಡವನ್ನು ಮಣಿಸಿತು. ಮೈಸೂರು ವಿವಿಐಇಟಿ ತಂಡವು ಪೊನ್ನಂಪೇಟೆ ಸಿಐಟಿ ತಂಡದ ವಿರುದ್ಧ ಜಯ ಗಳಿಸಿತು.
ಸುಮಾರು 20 ತಂಡಗಳು ಪಾಲ್ಗೊಂಡಿರುವ ಟೂರ್ನಿಯನ್ನು ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಪಿ. ಬೆಳ್ಯಪ್ಪ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಂತರ್‍ರಾಷ್ಟೀಯ ವಾಲಿಬಾಲ್ ಆಟಗಾರ ವಿ.ಆರ್. ಸನೋಜ್ ಅವರನ್ನು ಸನ್ಮಾನಿಸಲಾಯಿತು. ಕೊಡವ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ, ಪ್ರಾಂಶುಪಾಲ ಪಿ. ಮಹಬಲೇಶ್ವರಪ್ಪ ಉಪಸ್ಥಿತರಿದ್ದರು.
ಪರಿಸರ ಮಿತ್ರ ಪ್ರಶಸ್ತಿ
ಮಡಿಕೇರಿ: ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಶಸ್ತಿ ಪಡೆದ ಶಾಲೆಗೆ ಪ್ರಶಸ್ತಿಯೊಂದಿಗೆ ರೂ. 30 ಸಾವಿರ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ 10 ಹಸಿರು ಶಾಲೆಗಳಿಗೆ ತಲಾ ರೂ. 5 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ 10 ಹಳದಿ ಶಾಲೆಗಳಿಗೆ ತಲಾ ರೂ. 4 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವದು.
ಪರಿಸರ ಮಿತ್ರ ಶಾಲೆಯಾದ ಪಾರಾಣೆ ಪ್ರೌಢಶಾಲೆ, ಹಸಿರು ಶಾಲೆಗಳಾದ ಬಿ.ಸಿ. ಪ್ರೌಢಶಾಲೆ ದೇವಣಗೇರಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೂಡಿಗೆ, ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜು ಮಾದಾಪುರ, ಸರ್ಕಾರಿ ಪ್ರೌಢಶಾಲೆ ಕಾನ್ ಬೈಲ್, ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ, ಸರ್ಕಾರಿ ಪ್ರೌಢಶಾಲೆ ಸುಂಟಿಕೊಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೆಟ್ಟಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಳ್ಳಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಟ್ಟಿಹೊಳೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಗೂರು ಪಟ್ಟಿಯಲ್ಲಿವೆ. ಹಳದಿ ಶಾಲೆಗಳಾದ ನಂಜರಾಯಪಟ್ಟಣ ಪ್ರೌಢಶಾಲೆ ನಂಜರಾಯಪಟ್ಟಣ, ಸರ್ಕಾರಿ ಪ್ರೌಢಶಾಲೆ ಶಿರಂಗಾಲ, ಸರ್ಕಾರಿ ಪ್ರೌಢಶಾಲೆ ತೊರೆನೂರು, ಹೆಬ್ಬಾಲೆ ಪ್ರೌಢಶಾಲೆ, ಹೆಬ್ಬಾಲೆ ಸ.ಹಿ.ಪ್ರಾ. ಶಾಲೆ ಮುಳ್ಳೂರು, ಸ.ಹಿ.ಪ್ರಾ. ಶಾಲೆ ಅಭ್ಯತ್‍ಮಂಗಲ, ಸ.ಹಿ.ಪ್ರಾ. ಶಾಲೆ ಬಿಳಿಗೇರಿ, ಸ.ಹಿ.ಪ್ರಾ. ಶಾಲೆ ಕರಡಿಗೋಡು, ಸ.ಹಿ.ಪ್ರಾ. ಶಾಲೆ, ಬಿ. ಚೂರಿಕಾಡು, ಸ.ಹಿ.ಪ್ರಾ. ಶಾಲೆ ಹೆಗ್ಗಳ ಇವು ಆಯ್ಕೆಗೊಂಡಿವೆ.ಪ್ರವೇಶ ಪ್ರಕ್ರಿಯೆ ಆರಂಭ
ಮಡಿಕೇರಿ: ಮಡಿಕೇರಿ ತಾಲೂಕಿನಲ್ಲಿ 2018-19 ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ ಪ್ರವೇಶ ಪ್ರಕ್ರಿಯೆಯನ್ನು ಆನ್‍ಲೈನ್ ಮೂಲಕ ನಡೆಸಲಾಗುತ್ತದೆ. ಮಾರ್ಚ್ 20 ರೊಳಗೆ ದಾಖಲಾತಿ ಕೋರಿ ಪೋಷಕರು ತಾವು ಇಚ್ಚಿಸಿರುವ ಶಾಲೆಗಳಿಗೆ ಆನ್‍ಲೈನ್ ಮೂಲಕ ಅಗತ್ಯ ದಾಖಲಾತಿಗಳ ಸಮೇತ ಗರಿಷ್ಠ 5 ಶಾಲೆಗಳಿಗೆ ಆದ್ಯತೆ ಗುರುತಿಸಿ ಒಂದು ಅರ್ಜಿ ಸಲ್ಲಿಸಬಹುದು.
ವಯೋಮಿತಿ ಜೂನ್ 1 ಕ್ಕೆ ಎಲ್‍ಕೆಜಿ ತರಗತಿಗೆ 3 ವರ್ಷ 10 ತಿಂಗಳಿಂದ 4 ವರ್ಷ 10 ತಿಂಗಳು (01.08.2013 ರಿಂದ 31.07.2014) 1ನೇ ತರಗತಿಗೆ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳು (01.08.2011 ರಿಂದ 31.07.2012).
ದಾಖಲೆಗಳು: ಮಗು ಮತ್ತು ಪೋಷಕರ ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣ ಪತ್ರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1 ಪೋಷಕರ ಜಾತಿ ಪ್ರಮಾಣ ಪತ್ರ ಸಲ್ಲಿಸುವದು.
ಒಬಿಸಿ ವರ್ಗದವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸುವದು. ಎಲ್‍ಕೆಜಿ ಪ್ರವೇಶಕ್ಕೆ ಪರಿಶಿಷ್ಟ ಜಾತಿ 31 ಪರಿಶಿಷ್ಟ ಪಂಗಡ-06 ಒಬಿಸಿ -62 ಒಟ್ಟು 99. 1ನೇ ತರಗತಿಗೆ ಪರಿಶಿಷ್ಟ ಜಾತಿ -51 ಪರಿಶಿಷ್ಟ ಪಂಗಡ -12 ಒಬಿಸಿ -100 ಒಟ್ಟು 163 ಸೀಟುಗಳು ಲಭ್ಯವಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ತಿಳಿಸಿದ್ದಾರೆ.
ಕ್ಯಾಂಪಸ್ ಸಂದರ್ಶನ
ಗೋಣಿಕೊಪ್ಪ ವರದಿ: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜುವಿನಲ್ಲಿ ತಾ. 14 ರಂದು ಆರ್ಟೆಕ್ ಇನ್ಪೋಸಿಸ್ಟಮ್ಸ್ ವತಿಯಿಂದ ಉದ್ಯೋಗಾಂಕ್ಷಿಗಳಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲ ಮಹಾಬಲೇಶ್ವರ ತಿಳಿಸಿದರು.
2015, 2016 ಹಾಗೂ 2017 ನೇ ಸಾಲಿನಲ್ಲಿ ಬಿಇ, ಬಿಸಿಎ, ಎಮ್‍ಸಿಎ ಸೇರಿದಂತೆ ಯಾವುದೇ ಪದವಿ ಪಡೆದ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಸಂಖೆಯಲ್ಲಿ ನೇಮಕಾತಿ ಮಾಡಿಕೊಳ್ಳುವ ಉದ್ದೇಶದಿಂದ ಸಂಸ್ಥೆ ಸಂದರ್ಶನ ನಡೆಸಲಿದೆ. ಹೆಚ್ಚಿನ ಮಾಹಿತಿಗಾಗಿ 9538469916 ರಲ್ಲಿ ಸಂಪರ್ಕಿಸಲು ತಿಳಿಸಲಾಗಿದೆ.
ಗ್ರಾಮೀಣ ಅಧ್ಯಯನ
ಸಿದ್ದಾಪುರ: ಕೊಡಗು ಗ್ರಾಮೀಣ ಅಭಿವೃದ್ಧಿ ಮತ್ತು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಸಂತ ಮೇರಿ ಕಾಲೇಜು ಶಿರ್ವ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಅಧ್ಯಯನ ಶಿಬಿರ ಇತ್ತೀಚೆಗೆ ಅವರೆಗುಂದ ಬುಡಕಟ್ಟು ಕೃಷಿಕರ ಸಂಘದ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಎಂ.ಸಿ. ವಾಸು ಮಾತನಾಡಿ, ಬುಡಕಟ್ಟು ಸಮುದಾಯದಲ್ಲಿ ಅಗಿರುವ ಅಭಿವೃದ್ಧಿ ಹಾಗೂ ಮುಂದೆ ಆಗಬೇಕಾಗಿರುವ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯೆ ಸುಶೀಲಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂತ ಮೇರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸುಮೇಶ್, ಪ್ರೊ. ಕೃಷ್ಣನ್ ಮತ್ತು ಶಿಬಿರಾರ್ಥಿಗಳು ಹಾಜರಿದ್ದರು.