ಮಡಿಕೇರಿ, ಮಾ. 8: ದಕ್ಷಿಣ ಕೊಡಗಿನ ಅನೇಕ ಬೆಳೆಗಾರರಿಂದ ಕಾಫಿ ಖರೀದಿಸಿ ಹಣ ಪಾವತಿಸದೆ ವ್ಯಾಪಾರಿಗಳಿಬ್ಬರು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾ. 9 ರಂದು (ಇಂದು) ಮೋಸ ಹೋಗಿರುವ ಬೆಳೆಗಾರರ ಸಹಿತ ವಿವಿಧ ಸಂಘಟನೆಗಳ ಪ್ರಮುಖರು ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ‘ಶಕ್ತಿ’ಗೆ ತಿಳಿಸಿವೆ.

ಕೋಟೂರುವಿನ ನಿವಾಸಿ ಎ.ಎಂ. ಅರುಣ್‍ಕುಮಾರ್ ಅವರ ಪ್ರಕಾರ 2008 ರಿಂದ ತಮಗೆ ಸೇರಿದ ಕಟ್ಟಡದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಾಫಿ ಕ್ಯೂರಿಂಗ್ ವಕ್ರ್ಸ್ ನಡೆಯುತ್ತಿದ್ದು, ಪ್ರಾರಂಭದಲ್ಲಿ ಕೇರಳ ಮೂಲದ ತಂಗಚ್ಚನ್, ಮ್ಯಾಥ್ಯೂ, ಬಿಜೇಶ್ ಹಾಗೂ ಬಿಜು ಜಾಕೋಬ್ ಬೆಳೆಗಾರರಿಂದ ಕಾಫಿ ಖರೀದಿಸುತ್ತಿದ್ದರೆನ್ನಲಾಗಿದೆ.

ನಾಲ್ಕಾರು ವರ್ಷ ವಹಿವಾಟು ನಡೆಸುತ್ತಾ ಬೆಳೆಗಾರರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದ ತಂಗಚ್ಚನ್ ಇತ್ತೀಚಿನ ವರ್ಷಗಳಲ್ಲಿ ಬೇರೆಡೆಗೆ ತೆರಳಿದ್ದು, ಮ್ಯಾಥ್ಯೂ ಕೂಡ ಈ ವಹಿವಾಟಿನಿಂದ ಹಿಂದೆ ಸರಿದಿರುವದಾಗಿ ಹೇಳಲಾಗುತ್ತಿದೆ.

ಅನಂತರದಲ್ಲಿ ಒಟ್ಟಾರೆ ವ್ಯವಹಾರವನ್ನು ಬಿಜೇಶ್ ಹಾಗೂ ಬಿಜು ಜಾಕೋಬ್ ನೋಡಿಕೊಳ್ಳುತ್ತಾ, ಇತ್ತೀಚೆಗೆ ಕಳೆದ ಆರು ತಿಂಗಳಿನಿಂದ ಆಗಿಂದಾಗ್ಗೆ ಕೇರಳಕ್ಕೆ ತೆರಳುತ್ತಿದ್ದು, ಬೆಳೆಗಾರರಿಗೆ ಸಕಾಲದಲ್ಲಿ ಕಾಫಿ ಹಣ ಪಾವತಿಸದೆ ವಿಳಂಬಧೋರಣೆ ಅನುಸರಿಸುತ್ತಿದ್ದರೂ, ಆ ಬಳಿಕ ಹಣ ಒದಗಿಸುತ್ತಿದ್ದರೆಂದು ಗೊತ್ತಾಗಿದೆ.

ಈ ನಡುವೆ ಕಳೆದ ಫೆಬ್ರವರಿ 27 ರಂದು ವ್ಯಾಪಾರಿಗಳಿಬ್ಬರು ಕ್ಯೂರಿಂಗ್ ವಕ್ರ್ಸ್ ಬಾಗಿಲು ತೆರೆಯದಿರುವದು ಕಂಡುಬಂದಿದೆ. ಆ ಮೇರೆಗೆ ಕಾಫಿ ನೀಡಿದ್ದ ಬೆಳೆಗಾರರು ಸಂಶಯ ಗೊಂಡು ಕಟ್ಟಡ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಸಂದರ್ಭ ಮಾಲೀಕ ಅರುಣ್ ಕುಮಾರ್ ಕಾಫಿ ಕ್ಯೂರಿಂಗ್ ವಕ್ರ್ಸ್ ತಪಾಸಣೆ ನಡೆಸಲಾಗಿ, ವ್ಯಾಪಾರಿಗಳಿಬ್ಬರು ಬಿಡಿ ಕಾಫಿ ಕೂಡ ದಾಸ್ತಾನು ಇರಿಸದೆ ಸಂಪೂರ್ಣ ಖಾಲಿಯಾಗಿರುವದು ಗೋಚರಿಸಿದೆ.

ಕಳೆದ ಒಂಭತ್ತು ವರ್ಷಗಳಿಂದ ವ್ಯವಹಾರದಲ್ಲಿ ತೊಡಗಿದ್ದ ವ್ಯಾಪಾರಿಗಳ ಈ ನಡೆಯಿಂದ ತೀವ್ರ ಗಾಬರಿಗೊಂಡಿರುವ ಬೆಳೆಗಾರರು ಕಂಗಾಲಾಗುವದರೊಂದಿಗೆ, ಬೇರೆ ದಾರಿ ಕಾಣದೆ ಪೊನ್ನಂಪೇಟೆ ಪೊಲೀಸ್ ಠಾಣೆಗೆ ಪುಕಾರು ಸಲ್ಲಿಸಿದ್ದಾರೆ. ಈ ವೇಳೆ ಬೆಳೆಗಾರರು ಕಾಫಿ ಪಾವತಿಸಿರುವ ಕುರಿತು ಸಮರ್ಪಕ ದಾಖಲಾತಿ ನೀಡಿಲ್ಲ ಎಂಬ ಕಾರಣದೊಂದಿಗೆ ಮೊಕದ್ದಮೆ ದಾಖಲಿಸಲು ಹಿಂದೇಟು ಹಾಕಲಾಗಿದೆ.

ಬದಲಾಗಿ ವಂಚನೆಗೊಳಗಾಗಿ ರುವ ಬೆಳೆಗಾರ ಪ್ರಮುಖರು ಕೆಲವರು ಓರ್ವ ಪೊಲೀಸ್ ಸಹಿತ ವರ್ತಕರ ಊರು ಕೇರಳದ ವಯನಾಡುವಿನ ಪುಲ್‍ಪಳ್ಳಿ ಎಂಬಲ್ಲಿಗೆ ಹುಡುಕಿ ಕೊಂಡು ತಾ. 4 ರಂದು ತೆರಳಿದ್ದಾರೆ. ಅಲ್ಲದೆ ಇಲ್ಲಿನ ಪೊಲೀಸರು ಅಲ್ಲಿನ ಓರ್ವ ಸಿಬ್ಬಂದಿಯ ಸಹಕಾರ ಪಡೆದು ಮೋಸ ಮಾಡಿದ್ದ ಮಂದಿಯ ಮನೆ ಪತ್ತೆ ಹಚ್ಚಿದ್ದಾರೆ.

ಈ ಸಂದರ್ಭ ಬಿಜೇಶ್ ಹಾಗೂ ಜಾಕೋಬ್‍ರನ್ನು ಹುಡುಕಿಕೊಂಡು ಬಂದಿರುವ ಸುಳಿವು ಪಡೆದ ಅಲ್ಲಿನ ಮಂದಿ ಅರೆಕ್ಷಣದಲ್ಲಿ ಗುಂಪುಗೂಡಿ ದ್ದಲ್ಲದೆ ವಂಚನೆಗೆ ಒಳಗಾಗಿರುವ ಬೆಳೆಗಾರರ ವಿರುದ್ಧವೇ ಹರಿ ಹಾಯ್ದಿದ್ದು, ಹಲ್ಲೆಗೂ ಯತ್ನಿಸಿದರೆನ್ನ ಲಾಗಿದೆ. ಇಲ್ಲಿ ಪೊಲೀಸರ ಸಮಯ ಪ್ರಜ್ಞೆಯಿಂದ ಬೆಳೆಗಾರರು ಅಪಾಯ ದಿಂದ ಪಾರಾಗಿ ಹಿಂತೆರಳಿದ್ದಾರೆ.

ಈಗಾಗಲೇ ಮೋಸ ಹೋಗಿರುವ 28ಕ್ಕೂ ಅಧಿಕ ಬೆಳೆಗಾರರು ತಮ್ಮ ಬಾಪ್ತು ಕಾಫಿಯಿಂದ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದು, ನಿಖರವಾಗಿ ಎಷ್ಟು ಎಂದು ತಿಳಿಯಬೇಕಿದೆಯಂತೆ; ಹೀಗಾಗಿ ವಂಚನೆಗೆ ಒಳಗಾಗಿರುವ ತಮಗೆ ನ್ಯಾಯ ಕೊಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠರಿಗೂ ದೂರು ಸಲ್ಲಿಸಿದ್ದಾರೆ.

ಮಾಲೀಕರ ಅಳಲು: ನಾಲ್ಕೇರಿ, ಬೆಸಗೂರು, ಕಿರುಗೂರು, ಬಲ್ಯಮುಂಡೂರು, ನಲ್ಲೂರು ಸೇರಿದಂತೆ ಸುತ್ತ ಮುತ್ತಲಿನ ಅನೇಕ ಬೆಳೆಗಾರರು ಲಕ್ಷ ಲಕ್ಷ ಮೌಲ್ಯದ ಕಾಫಿ ಕೊಟ್ಟು ಹಣ ವಂಚನೆಗೆ ಸಿಲುಕಿದ್ದರೆ; ಸ್ವತಃ ಕಟ್ಟಡ ಮಾಲೀಕರು ಕೂಡ 56 ಚೀಲ ಕಾಫಿಯೊಂದಿಗೆ ಕ್ಯೂರಿಂಗ್ ವಕ್ರ್ಸ್‍ನ ವಿದ್ಯುತ್ ಬಿಲ್ ಕಟ್ಟದೆ ಪಂಗನಾಮ ಹಾಕಿರುವ ವರ್ತಕರಿಂದ ಆ ಬಾಬ್ತು ರೂ. 76 ಸಾವಿರ ಮೋಸ ಹೋಗಿದ್ದಾಗಿ ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ತಾ. 9 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಪೊನ್ನಂಪೇಟೆಯಲ್ಲಿ ಒಗ್ಗೂಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾ ಗುವದು ಎಂದು ವಂಚನೆಗೊಳಗಾಗಿ ರುವ ಬೆಳೆಗಾರರ ಪರವಾಗಿ ಮೇಚಮಾಡ ಕಾರ್ಯಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.

ಎಸ್ಪಿ ಪ್ರತಿಕ್ರಿಯೆ: ಬೆಳೆಗಾರರಿಗೆ ವಂಚನೆಯ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರು, ಕಾಫಿ ಮತ್ತು ಕಾಳು ಮೆಣಸು ಇತ್ಯಾದಿ ಖರೀದಿಯಲ್ಲಿ ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ವಂಚನೆ ನಡೆಯುತ್ತಿದ್ದು, ಬೆಳೆಗಾರರು ಜಾಗೃತರಾಗುವಂತೆ ಸಲಹೆ ನೀಡಿದ್ದಾರೆ.

ಅಲ್ಲದೆ ಕಾಫಿ ನೀಡಿರುವ ಬೆಳೆಗಾರರು ಮೋಸವೆಸಗಿರುವ ವ್ಯಾಪಾರಿಗಳಿಂದ ಸೂಕ್ತ ದಾಖಲಾತಿ ಇರಿಸಿಕೊಳ್ಳದ ಕಾರಣ ಪ್ರಕರಣ ದಾಖಲಿಸಲು ಕಾನೂನಿನ ತೊಡಕು ಎದುರಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಂತೂ ಪೊಲೀಸ್ ಇಲಾಖೆಯಿಂದ ಆರೋಪಿಗಳ ಹಿನ್ನೆಲೆಯೊಂದಿಗೆ ಪತ್ತೆಗೆ ಮಾಹಿತಿ ಕಲೆ ಹಾಕುತ್ತಿರುವದಾಗಿ ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಕಳೆದ ಒಂದು ದಶಕದ ಹಿಂದೆ ಜಿಲ್ಲೆಯ ಹಲವೆಡೆ ಬೆಳೆಗಾರರಿಗೆ ಹಲವು ವ್ಯಾಪಾರಿಗಳು ಮೋಸ ಗೊಳಿಸಿದ್ದ ಬೆಳವಣಿಗೆ ಮತ್ತೆ ಈಗ ಕಾಣುವಂತಾಗಿದ್ದು, ಒಂದೆಡೆ ಬೆಲೆ ಕುಸಿತ ಹಾಗೂ ಫಸಲು ಇಳಿಮುಖದ ನಡುವೆ ಗಳಿಸಿರುವ ಫಸಲಿನಿಂದ ವಂಚಿಸಲ್ಪಡುತ್ತಿರುವ ಬೆಳೆಗಾರರಿಗೆ ಆ ದೇವರೇ ದಿಕ್ಕು ತೋರಬೇಕಷ್ಟೆ.