ಶ್ರೀಮಂಗಲ, ಮಾ. 8: ರಾಜ್ಯದ ಏಕೈಕ ಮೃತ್ಯುಂಜಯ ದೇವಸ್ಥಾನ ಎಂದು ಪ್ರಸಿದ್ಧಿಯಾಗಿರುವ ಬಾಡಗರಕೇರಿಯ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ಕೊಡಿಮರ ಇಳಿಸುವ ಮೂಲಕ ಇಂದು ತೆರೆಬಿದ್ದಿತು. ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಫೆ:25ಕ್ಕೆ ಆರಂಭವಾದ ವಾರ್ಷಿಕೋತ್ಸವ ದಿನನಿತ್ಯ ವಿವಿಧ ಧಾರ್ಮಿಕ ಆಚರಣೆಯೊಂದಿಗೆ ನಡೆದ ಉತ್ಸವದಲ್ಲಿ ಬುಧವಾರ ಹಗಲು ಹಾಗೂ ರಾತ್ರಿ ಉತ್ಸವದÀ ವಿಶೇಷ ಸಾಂಪ್ರದಾಯಿಕ ಆಚರಣೆಗಳು ನಡೆದವು. ತುಲಾಭಾರ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ಉತ್ಸವಮೂರ್ತಿ ದರ್ಶನ, ಅವಭೃತ ಸ್ನಾನ, ರಾತ್ರಿ ಉತ್ಸವ ಮೂರ್ತಿ ದರ್ಶನ ಹಾಗೂ ವಸಂತ ಪೂಜೆ ನಡೆಯಿತು. ಸಂಜೆ ಪೊನ್ನಂಪೇಟೆಯ ಶಿವ ಕಾಲೋನಿಯ ನಾದನೃತ್ಯ, ಸಂಗೀತ ಮತ್ತು ಭರತನಾಟ್ಯ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಭಕ್ತಿ ನೃತ್ಯಗಳು ನಡೆಯಿತು. ಭಕ್ತಾದಿಗಳಿಗೆ ಸಾಮೂಹಿಕ ಅನ್ನದಾನ, ಸಂಜೆ ಬಾಡಗರಕೇರಿಯ ಮರೆನಾಡು ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಲಘು ಫಲಾಹಾರ ಏರ್ಪಡಿಸಲಾಗಿತ್ತು. ರಾತ್ರಿ ರಂಗುರಂಗಿನ ಸಿಡಿಮದ್ದು ಜನರನ್ನು ಆಕರ್ಷಿಸಿತು.
ಈ ಸಂದರ್ಭ ದೇವತಕ್ಕರಾದ ಅಣ್ಣೀರ ಕುಟುಂಬಸ್ಥರು, ನಾಡತಕ್ಕರಾದ ಕಾಯಪಂಡ ಕುಟುಂಬಸ್ಥರು, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಚೋನೀರ ಸುಬ್ರಮಣಿ, ಕಾರ್ಯದರ್ಶಿ ಅಮ್ಮತ್ತೀರ ಚಂದ್ರಶೇಖರ್, ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ನಾಡಿನಿಂದ ಆಗಮಿಸಿದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.