ವೀರಾಜಪೇಟೆ, ಮಾ. 7: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಗೋಣಿಕೊಪ್ಪ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು 62x62 ಜಾಗವನ್ನು ಜೆಸಿಬಿ ಮೂಲಕ ಸಮತಟ್ಟು ಮಾಡಲಾಗಿದೆ. ತಾ. 9 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಆಕ್ಷೇಪ : ಕೆಎಸ್‍ಆರ್‍ಟಿಸಿ ಸಂಸ್ಥೆಗೆ ಸೇರಿದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಸಂಸ್ಥೆಯಿಂದ ನಿರಾಪೇಕ್ಷಣಾ ಪತ್ರ ತೆಗೆದುಕೊಳ್ಳದೆ ಕಾಮಾಗಾರಿ ಆರಂಭಿಸುತ್ತಿದ್ದಾರೆ ಎಂದು ನಿಲ್ದಾಣಾಧಿಕಾರಿ ವೀರಾಜಪೇಟೆ ನಗರ ಠಾಣೆಗೆ ದೂರು ಮೌಖಿಕವಾಗಿ ನೀಡಿದ್ದಾರೆ.
ಇದೇ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮಾಹಿತಿ ನೀಡಿ 6 ತಿಂಗಳ ಹಿಂದೆಯೆ ಜಾಗವನ್ನು ಗುರುತಿಸಲಾಗಿದೆ. ಸರ್ಕಾರದಿಂದ ಬಂದ ಆದೇಶವನ್ನು ಕೆಎಸ್‍ಆರ್‍ಟಿಸಿ ಸಂಸ್ಥೆಗೆ ಕಳುಹಿಸಿಕೊಡಲಾಗಿದೆ. ಸಂಸ್ಥೆಯು ಸರ್ಕಾರದ ಆದೇಶಕ್ಕೆ ಯಾವದೇ ಪ್ರತಿಕ್ರಿಯೆ ತೋರದ್ದರಿಂದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸರ್ಕಾರದ ಆದೇಶ ಪ್ರಕಾರ ತಮ್ಮ ಕಾರ್ಯದಲ್ಲಿ ಮುಂದಾದರು. ಇದೇ ಸಂದರ್ಭದಲ್ಲಿ ಅಭಿಯಂತರ ಹೇಮ್‍ಕುಮಾರ್, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಸ್ ನಿಲ್ದಾಣದ ಎರಡು ತಲೆಮಾರಿನ ಮೂರು ಮರಗಳಿದ್ದು ಜನರಿಗೆ ನೆರಳನ್ನು ನೀಡುತ್ತಿದೆ. ಯಾವದೇ ಕಾರಣಕ್ಕೂ ಮರಗಳನ್ನು ಕಡಿಯಬೇಡಿ ಎಂದು ಸಾರ್ವಜನಿಕರು ಮುಖ್ಯಾಧಿಖಾರಿಗಳನ್ನು ಆಗ್ರಹಿಸಿದರು.