ಶ್ರೀಮಂಗಲ, ಮಾ. 7: ಸುಮಾರು 600 ವರ್ಷಗಳ ಇತಿಹಾಸ ಪ್ರಸಿದ್ಧ ಬಲ್ಯಮುಂಡೂರು ಗ್ರಾಮದ ಶ್ರೀ ಮಾರಮ್ಮ ದೇವಾಲಯದ ಜೀರ್ಣೋದ್ಧಾರ ಕಾರ್ಯ ಏಪ್ರಿಲ್ 10, 11 ಮತ್ತು 12 ರಂದು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ತಿಳಿಸಿದ್ದಾರೆ. ಸುಮಾರು ರೂ. 50 ಲಕ್ಷ ವೆಚ್ಚದಲ್ಲಿ ಜೀರ್ಣೊದ್ಧಾರ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಅರ್ಥ ಭಾಗ ಕೆಲಸ ಮುಗಿದಿದ್ದು ಇನ್ನುಳಿದ ಕೆಲಸವನ್ನು ಏಪ್ರಿಲ್ ತಿಂಗಳ ಒಳಗೆ ಮುಗಿಸಬೇಕಾಗಿದೆ ಎಂದು ತಿಳಿಸಿದರು. ಈ ದೇವಸ್ಥಾನ ಉತ್ತರಾಭಿಮುಖವಾಗಿ ನಿಲ್ಲಲ್ಪಟ್ಟಿದ್ದು, ಇದರೊಂದಿಗೆ ಈ ದೇವಸ್ಥಾನದ ಅರ್ಧ ಕಿ.ಮೀ. ಅಂತರದಲ್ಲಿ ನಾಗದೇವತೆ, ಅಯ್ಯಪ್ಪ, ದುರ್ಗಾಪರಮೇಶ್ವರಿ, ಭದ್ರಕಾಳಿ ಹಾಗೂ ಬಸವೇಶ್ವರ ದೇವಸ್ಥಾನವನ್ನು ಹೊಂದಿದೆ. ಅಲ್ಲದೆ, ಸುಮಾರು 3.40 ಎಕರೆ ವಿಸ್ತಿರ್ಣದ ಬಸವಕೆರೆಯನ್ನು ಹೊಂದಿದೆ. ಅಲ್ಲದೆ, ಲಕ್ಷ್ಮಣ ತೀರ್ಥ ನದಿ, ಈ ಊರಿನ ಮುಖಾಂತರ ಹರಿಯುತ್ತಿದೆ. ದೇವಸ್ಥಾನದ ಮುಂಭಾಗದಲ್ಲಿ ಊರ ಅಂಬಲ ಸಹ ಇದ್ದು ಇಲ್ಲಿ ಈ ಊರಿಗೆ ಸಂಬಂಧಪಟ್ಟ ವಿಚಾರಗಳನ್ನು ಹಾಗೂ ದೇವಸ್ಥಾನದ ಕಾರ್ಯಚಟುವಟಿಕೆಗಳ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಇಷ್ಟೊಂದು ದೇವಸ್ಥಾನವನ್ನು ಹೊಂದಿರುವ ಈ ಸ್ಥಳ ಊರಿನ ಭಕ್ತಿಯ ಶ್ರದ್ಧಾ ಕೇಂದ್ರವಲ್ಲದೆ, ಹೊರ ಊರಿನ ಜನರು ಸಹ ಇಲ್ಲಿ ಬಂದು ತಮ್ಮ ಇಷ್ಟಾರ್ಥವನ್ನು ಸಿದ್ಧಿಸಿಕೊಂಡಿದ್ದಾರೆ. 1996 ರಿಂದ 99 ರವರೆಗೆ ಶ್ರೀ ದುರ್ಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಸ ಲಾಗಿದ್ದು, ಇದರೊಂದಿಗೆ ಶ್ರೀ ಅಯ್ಯಪ್ಪ ದೇವರು, ಭದ್ರಕಾಳಿ, ಬಸವೇಶ್ವರ ದೇವಸ್ಥಾನದ ಜೀರ್ಣೊದ್ಧಾರ ಕಾರ್ಯವನ್ನು ಸಹ ಮಾಡಿ ಮುಗಿಸಲಾಗಿದೆ. ಶ್ರೀ ಮಾರಮ್ಮ ದೇವರ ಜೀರ್ಣೊದ್ಧಾರದ ಬಗ್ಗೆ ಸ್ವರ್ಣ ಪ್ರಶ್ನೆ ನೋಡಿದಲ್ಲಿ ದೇವಸ್ಥಾನವನ್ನು ಹೊಸದಾಗಿ ನಿರ್ಮಿಸಿ ದೇವರ ಪ್ರತಿಷ್ಠಾಪನೆ ಮಾಡಬೇಕೆಂದು ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ಗ್ರಾಮದ ಹಾಗೂ ನಾಡಿನ ಭಕ್ತರ ಧನ ಸಹಾಯದಿಂದ ಜೀರ್ಣೊದ್ಧಾರ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಊರು ಹಾಗೂ ದೇವತಕ್ಕ ಕೊಟ್ಟಂಗಡ ಕಟ್ಟಿ ಪೆಮ್ಮಯ್ಯ ತಿಳಿಸಿದರು. ದೇವಿಯ ಪುನರ್‍ಪ್ರತಿಷ್ಠಾಪನೆ ಕಾರ್ಯಕ್ರಮ ಏ. 10 ರಂದು ಸಾಯಂಕಾಲ ಕೇರಳದ ತಳ್ಳಿಪರಂಬಿನ ಪಾಂಡುರಂಗನ್ ನಂಬೋದರಿ ಅವರ ಮುಂದಾಳತ್ವದಲ್ಲಿ 5 ಗಂಟೆಯಿಂದ ಗೋ ದಾನ ಪುಣ್ಯ ದೀಪಾರಾಧನೆ, ಪ್ರಸಾದ ಶುದ್ಧಿ, ರಕ್ಷಕಲಶ ಪೂಜೆ, ರಕ್ಷೋಘ್ಞ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಬಲಿ ಹಾಗೂ ಮಹಾಪೂಜೆ ನಡೆಯಲಿದೆ. ಏ. 11 ರಂದು ಬೆಳಿಗ್ಗೆ ಗಣಪತಿ ಹೋಮ, ಉಷಾ ಪೂಜೆ, ಮಹಾಮೃತ್ಯುಂಜಯ ಹೋಮ, ನವಗ್ರಹ ಹೋಮ, ಚತುಷ್ಪಧಿ ಪೂಜೆ, ಧಾರಾಪೂಜೆ, ಪಂಚಗವ್ಯಪೂಜೆ, ಪಂಚಾಂಗ ಪೂಜೆ, ಮಹಾಪೂಜೆ, ಹಾಗೂ ಸಾಯಂಕಾಲ ದುರ್ಗಾಪೂಜೆ, ಮಹಾಪೂಜೆ ನಡೆಯಲಿದೆ. ಏ. 12 ರಂದು ಬೆಳಿಗ್ಗೆ ಗಣಪತಿ ಹೋಮ, ಉಷಾ ಪೂಜೆ, 108 ಕಲಶಾಭಿಶೇಕ ಪೂಜೆ, ಬ್ರಹ್ಮಕಲಶಾಭಿಶೇಕ, ಮಹಾ ಪೂಜೆ ನಡೆಯಲಿದೆ.