ಕೂಡಿಗೆ, ಮಾ. 7: ಕೂಡಿಗೆಯಿಂದ ಕೋವರ್‍ಕೊಲ್ಲಿವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಡಾಂಬರೀಕರಣ ಕಾಮಗಾರಿ ಮುಗಿದಿದ್ದರೂ ಗುತ್ತಿಗೆದಾರ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡದೆ ಚರಂಡಿಯಲ್ಲಿ ಹರಿಯಬೇಕಾದ ನೀರು ಪಕ್ಕದಲ್ಲಿ ಅಳವಡಿಸಿರುವ ಒಡೆದು ಹೋಗಿರುವ ಕುಡಿಯುವ ನೀರಿನ ಪೈಪ್‍ಗೆ ಸೇರುತ್ತಿದ್ದು, ಇದೀಗ ಕೊಳಚೆ ನೀರು ಕುಡಿಯುವ ನೀರಿನ ಜೊತೆಯಲ್ಲಿ ಪೈಪ್‍ನಲ್ಲಿ ಬರುತ್ತಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ-ಕೊಪ್ಪಲು ಗ್ರಾಮದ ಮುಖ್ಯ ಬೀದಿಗೆ ಸರಬರಾಜಾಗುತ್ತಿರುವ ಕುಡಿಯುವ ನೀರಿನ ಪೈಪ್‍ಲೈನ್‍ನಲ್ಲಿ ಕೊಳಚೆ ನೀರು ಮಿಶ್ರಿತವಾಗಿ ನೀರು ಸರಬರಾಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳಾದ ನಾರಾಯಣ, ಗಣೇಶ, ರಾಜ, ರವಿ ಕುಡಿಯುವ ನೀರಿನ ಪೈಪ್‍ಗಳನ್ನು ಹೊಸದಾಗಿ ಹಾಕಲು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದು, ರಸ್ತೆಯ ಬದಿಗಳಲ್ಲಿ ಕೊಳಚೆ ನೀರು ಚರಂಡಿಯಲ್ಲಿ ಹೋಗುವಂತೆ ಸಮರ್ಪಕವಾಗಿ ಚರಂಡಿಯನ್ನು ನಿರ್ಮಾಣ ಮಾಡಬೇಕು ಎಂದು ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೆ ತರಾಟೆಗೂ ತೆಗೆದುಕೊಂಡಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ