ಗೋಣಿಕೊಪ್ಪ ವರದಿ, ಮಾ. 7: ಜಿಲ್ಲಾಧಿಕಾರಿ ಕಾಳಜಿಯಿಂದ ದೇವರಪುರ ಪೈಸಾರಿಯಲ್ಲಿರುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ದೊರೆಯುವ ವಿಶ್ವಾಸವಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಹೇಳಿದರು.
ದೇವರಪುರ ಪೈಸಾರಿಯಲ್ಲಿರುವ ನಿವಾಸಿಗಳು ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಗಾಂಧಿ ಮೈದಾನದಲ್ಲಿ 8 ದಿನಗಳ ಆಹೋರಾತ್ರಿ ಧರಣಿ ಅಂತ್ಯಗೊಂಡಿದ್ದು, ನಿವಾಸಿಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಇದು ಹೋರಾಟದ ಫಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾಧಿಕಾರಿ ಶ್ರೀವಿದ್ಯಾ ನೀಡಿದ್ದ ಭರವಸೆಯಂತೆ ನಡೆದುಕೊಳ್ಳುತ್ತಿದ್ದಾರೆ. ನೀರಿನ ವಿತರಣೆಯಾಗುತ್ತಿದೆ. ಅಲ್ಲಿ ತಾತ್ಕಾಲಿಕ ಶೌಚಗೃಹ ನಿರ್ಮಾಣ, ಸೋಲಾರ್ ಲ್ಯಾಂಪ್ ನೀಡುವ ಕಾರ್ಯ ನಡೆಯುವ ವಿಶ್ವಾಸವಿದೆ. ಅದರಂತೆ ಗುಂಡಿ ಬಿದ್ದಿರುವ ರಸ್ತೆಗಳಿಗೆ ಮಣ್ಣು ಹಾಕಿ ವಾಹನ ಓಡಾಡಲು ಅವಕಾಶ ಮಾಡಿಕೊಡ ಲಾಗುವದು ಎಂದರು.
ಹಿಂದೆ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಜೆ.ಎ. ಕರುಂಬಯ್ಯ ಅವರ ಅಧಿಕಾರಾವಧಿಯಲ್ಲಿ ಹಕ್ಕುಪತ್ರ ವಿತರಣೆಯಾಗಿದ್ದು, ಅದು ಸರ್ಕಾರಿ ಪೈಸಾರಿಯಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಸಿಂಗಿ ಸತೀಶ್, ಪಿ.ಜೆ. ಸುಬ್ರಮಣಿ ಹಾಗೂ ತಾಲೂಕು ಸಂಚಾಲಕ ತಂಗರಾಜ್ ಉಪಸ್ಥಿತರಿದ್ದರು.