ಸೋಮವಾರಪೇಟೆ, ಮಾ. 7: ಸಮಾಜದಲ್ಲಿ ಅದೆಷ್ಟೋ ಮಂದಿ ಸ್ಥಿತಿವಂತರಿದ್ದಾರೆ. ಕೆಲವರು ಹುಟ್ಟು ಶ್ರೀಮಂತರಾಗಿದ್ದರೆ, ಇನ್ನು ಕೆಲವರು ಬಡತನದ ಬೇಗೆಯಲ್ಲಿ ಬೆಂದು ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ಯಶಸ್ಸಿನ ಹಿಂದೆ ಹಣವೂ ಬರುತ್ತದೆ. ಇಂತಹ ಹಣವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸುವವರು ಬೆರಳೆಣಿಕೆಯ ಮಂದಿ ಮಾತ್ರ. ಇಂತಹವರ ಸಾಲಿನಲ್ಲಿ ಅಗ್ರಪಂಥೀಯರಾಗಿ ನಿಲ್ಲುವ ಹರಪಳ್ಳಿ ರವೀಂದ್ರ ಅವರು, ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು ಎರಡೂವರೆ ಎಕರೆ ಕೆರೆಯ ಹೂಳೆತ್ತಲು ನಿರ್ಧರಿಸಿ ಕಾರ್ಯರೂಪಕ್ಕೆ ಇಳಿದಿದ್ದಾರೆ.

ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಯಡೂರು ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಬತ್ತುತ್ತಿರುವ ಊರದೇವರ ಕೆರೆಯನ್ನು ಹರಪಳ್ಳಿ ರವೀಂದ್ರ ಅವರು ಸುಮಾರು 8 ಲಕ್ಷ ವೆಚ್ಚದಲ್ಲಿ ಪುನರುಜ್ಜೀವಗೊಳಿಸಲು ನಿರ್ಧರಿಸಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದ್ದಾರೆ.

ಮೂಲತಃ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಹರಪಳ್ಳಿ ಗ್ರಾಮದವರಾದ ರವೀಂದ್ರ ಅವರು ಕಳೆದ ಕೆಲ ದಶಕದಿಂದ ಬೆಂಗಳೂರಿ ನಲ್ಲಿ ಉದ್ಯಮಿಯಾಗಿದ್ದರೂ ಹುಟ್ಟೂರಿನ ನಂಟು ಬಿಟ್ಟಿಲ್ಲ. ಪ್ರತಿ ವರ್ಷ ಸೋಮವಾರಪೇಟೆ ಭಾಗದ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಸೇರಿದಂತೆ ಸಂಘ-ಸಂಸ್ಥೆಗಳ ಸಮಾಜಮುಖಿ ಕಾರ್ಯಕ್ಕೆ ಸ್ಪಂದಿಸುತ್ತಾ ಬಂದಿರುವ ಇವರು, ಇದೀಗ ಗ್ರಾಮಕ್ಕೆ ಒಳಿತಾಗು ವಂತಹ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಉದ್ಯಮಿ ಯಾಗಿದ್ದರೂ ಕೃಷಿಕ ಜೀವನದಿಂದ ವಿಮುಖರಾಗದ ರವೀಂದ್ರ, ಇಂದಿಗೂ ಹರಪಳ್ಳಿಯಲ್ಲಿರುವ ತಮ್ಮ ಗದ್ದೆಯಲ್ಲಿ ಉಳುಮೆ ಬಿತ್ತನೆ ಮಾಡಿ, ಅಲ್ಲಿಂದ ಬರುವ ಭತ್ತವನ್ನೇ ಅಕ್ಕಿಮಾಡಿ ಊಟಕ್ಕೆ ಉಪಯೋಗಿಸುವ ಸರಳ ಜೀವಿಯಾಗಿದ್ದು, ಬಾಲ್ಯದ ದಿನಗಳಲ್ಲಿ ಊರಿಗೆ ತೆರಳುವ ಸಂದರ್ಭ ಇದೇ ಕೆರೆಯಲ್ಲಿ ನೀಡು ಕುಡಿಯುತ್ತಿದ್ದರು.

ಇತ್ತೀಚಿನ ವರ್ಷಗಳಲ್ಲಿ ಯಡೂರು ದೇವರ ಕೆರೆಯಲ್ಲಿ ಹೂಳು ತುಂಬಿ ನೀರು ಬತ್ತಿ ಬರಿದಾದುದನ್ನು ಕಂಡ ರವೀಂದ್ರ, ಗ್ರಾಮಸ್ಥರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿ, ಅವರುಗಳ ಒಪ್ಪಿಗೆಯ ಮೇರೆಗೆ ತಮ್ಮ ಸ್ವಂತ ಹಣದಿಂದ ಕೆರೆಯ ಹೂಳೆತ್ತಲು ಮುಂದಾಗಿದ್ದಾರೆ. ಸುಮಾರು 8 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ತನ್ನ ದುಡಿಮೆ ಹಣದಿಂದ ಭರಿಸುವದಾಗಿ ತಿಳಿಸಿರುವ ಇವರು, 15 ದಿನದೊಳಗೆ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದ್ದಾರೆ. ಎರಡು ಜೆಸಿಬಿ, ಕ್ಯಾಂಟರ್ ವಾಹನಗಳು ಕೆರೆಯ ಹೂಳೆತ್ತುವ ಕಾರ್ಯಕ್ಕೆ ಬಳಕೆಯಾಗುತ್ತಿದ್ದು, ಯಡೂರು ಸೋಮೇಶ್ವರ ದೇವಾಲಯದ ಅರ್ಚಕ ಸರ್ವೇಶ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಇದಕ್ಕೂ ಮುನ್ನ ಗ್ರಾಮಸ್ಥರು ಕೆರೆ ಏರಿಯ ಮೇಲೆ ಬೆಳೆದಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದರು. ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಹರಪಳ್ಳಿ ರವೀಂದ್ರ, ಕಳೆದ 25 ವರ್ಷಗಳ ಹಿಂದೆ ಎಂದೂ ತುಂಬಿರುತ್ತಿದ್ದ ಕೆರೆ ಇತ್ತೀಚೆಗೆ ಬತ್ತಿರುವದು ಖೇದಕರ. ಈ ಹಿನ್ನೆಲೆ ಕೆರೆಯ ಹೂಳೆತ್ತಲು ನಿರ್ಧರಿಸಿ ಕಾರ್ಯರೂಪಕ್ಕೆ ತರುತ್ತಿದ್ದೇನೆ. ಇದರೊಂದಿಗೆ ತಾಲೂಕಿನ ಇನ್ನೂ ಅನೇಕ ಕೆರೆಗಳ ಹೂಳೆತ್ತುವ ಬಗ್ಗೆ ಯೋಜನೆಯಿದೆ. ಮಳ್ತೆ, ಅಬ್ಬೂರುಕಟ್ಟೆ, ಆನೆಕೆರೆಗಳ ಹೂಳೆತ್ತಲು ಚಿಂತಿಸ ಲಾಗಿದೆ. ಈ ಕಾರ್ಯ ಒಬ್ಬನಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು.

ಯಡೂರು ಗ್ರಾಮಾಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಬತ್ತಿದ್ದ ಗ್ರಾಮದ ಕೆರೆಯಲ್ಲಿ ಹೂಳೆತ್ತಲು ರವೀಂದ್ರ ಅವರು ಮುಂದಾಗಿರುವದು ಶ್ಲಾಘನೀಯ. ಇವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇದರೊಂದಿಗೆ ಯಡೂರು ಭಾಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು, ಶಾಲೆಗೆ ಕಂಪ್ಯೂಟರ್ ನೀಡಿದ್ದಾರೆ. ಇದೀಗ ಯಾವದೇ ಸರ್ಕಾರ ಮಾಡದ ಕಾರ್ಯವನ್ನು ರವೀಂದ್ರ ಅವರು ಮಾಡಿದ್ದಾರೆ ಎಂದರು.

ಕೆರೆಯ ಹೂಳೆತ್ತುವಂತೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಯಾವದೇ ಪ್ರಯೋಜನ ಆಗಿರಲಿಲ್ಲ. ಸರ್ಕಾರವೇ ನಾಚಿಕೆ ಪಟ್ಟುಕೊಳ್ಳುವಂತೆ ರವೀಂದ್ರ ಅವರು ತಮ್ಮ ಸಮಾಜಮುಖಿ ಕಾರ್ಯದ ಮೂಲಕ ಉತ್ತರ ನೀಡಿದ್ದಾರೆ ಎಂದು ಭಾನುಪ್ರಕಾಶ್ ಅಭಿಪ್ರಾಯಿಸಿದರು.

ಈ ಸಂದರ್ಭ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ರಘು, ಸಹಕಾರ ಸಂಘದ ಅಧ್ಯಕ್ಷ ಡಿ.ಸಿ. ರಾಜು, ಪ್ರಮುಖರಾದ ವೈ.ಎಂ. ನಾಗರಾಜು, ಮುತ್ತಣ್ಣ, ಪರಮೇಶ್, ರವಿ, ಜಗದೀಶ್ ಸೇರಿದಂತೆ ಗ್ರಾಮಸ್ಥರು ಉಪಪಸ್ಥಿತರಿದ್ದರು.