ಸಿದ್ದಾಪುರ, ಮಾ. 7: ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬನೆಯ ಬದುಕನ್ನು ಕಂಡುಕೊಳ್ಳಬೇಕೆಂದು ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ಕರೆ ನೀಡಿದರು. ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಲ್ಲಿಹುದಿಕೇರಿ ಡೋಮಿನಸ್ ಕ್ರೀಡಾ ಮತ್ತು ಕಲಾ ಯುವಜನ ಸಂಘದ ಸಂಯುಕ್ತ ಆಶ್ರಯದಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ಸಭಾಂಗಣದಲ್ಲಿ 3 ತಿಂಗಳ ಕೌಶಲ್ಯ ಅಭಿವೃದ್ಧಿ ಬ್ಯೂಟೀಶನ್ ತರಬೇತಿ ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ನೆಲ್ಲಿಹುದಿಕೇರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ ಮಾತನಾಡಿ, ಮಹಿಳೆಯರು ಉದ್ಯೋಗ ಕಂಡುಕೊಳ್ಳಲು ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪಡೆದುಕೊಂಡು ಬ್ಯಾಂಕ್ನ ಮೂಲಕ ಸಾಲ ಪಡೆದುಕೊಳ್ಳಲು ಅವಕಾಶವಿದ್ದು, ಆರ್ಥಿಕ ಸುಧಾರಣೆಯನ್ನು ಕಂಡಕೊಳ್ಳಬಹುದು ಎಂದರು.
ಸಮಾಜ ಸೇವಕ ಜೋಸೆಫ್ ಶ್ಯಾಂ, ನೆಲ್ಲಿಹುದಿಕೇರಿಯ ಡೋಮಿನಸ್ ಸಂಘವು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮೂರು ತಿಂಗಳಿನಲ್ಲಿ ಅತಿ ಹೆಚ್ಚು ದಿನ ತರಬೇತಿಗೆ ಹಾಜರಾದ ಶಿಬಿರಾರ್ಥಿಗಳಾದ ಮಂಗಳ, ಭಾಗೀರತಿ, ಸ್ವಾತಿ, ಪೂಜ, ನೇತ್ರ ಇವರುಗಳಿಗೆ ಬಹುಮಾನ ನೀಡಲಾಯಿತು. ತರಬೇತಿ ನಡೆಸಲು ಮುತುವರ್ಜಿ ವಹಿಸಿದ ಡೋಮಿನಸ್ ಸಂಘದ ಅಧ್ಯಕ್ಷ ಶೌಕತ್ ಆಲಿ ಅವರನ್ನು ಶಿಬಿರಾರ್ಥಿಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಸುಹದಾ ಅಶ್ರಫ್, ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ಸಿದ್ದಾಪುರ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎನ್. ವಾಸು, ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ, ಸಂಘಟನಾ ಕಾರ್ಯದರ್ಶಿ ಎಂ.ಎ. ಅಜೀಜ್, ಡೋಮಿನಸ್ ಸಂಘದ ಕಾರ್ಯದರ್ಶಿ ಶ್ರೇಯಸ್ ಕುಮಾರ್, ಸಹ ಕಾರ್ಯದರ್ಶಿ ಶಿಯಾಬುದ್ದೀನ್, ತರಬೇತಿ ಶಿಕ್ಷಕಿ ದೇವಕಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಇದ್ದರು.