ಮಡಿಕೇರಿ, ಮಾ. 7: ತಾ. 9 ರಿಂದ 11 ರವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲ-ಪುಷ್ಪ ಪ್ರದರ್ಶನ ನಡೆಯಲಿದ್ದು, ಉದ್ಘಾಟನೆಯನ್ನು ತಾ. 9 ರಂದು ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.
ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.
ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ.
ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ 3 ಸಾವಿರದಿಂದ 4 ಸಾವಿರ ಸಂಖ್ಯೆಯ ವಿವಿಧ ಜಾತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಗಾಂಪ್ರಿನಾ, ಕಾಕಡ ಮಲ್ಲಿಗೆ, ಚಂಡುಹೂ, ಪ್ಲಾಕ್ಸ್, ಜೀನಿಯಾ, ಜರೇನಿಯಂ, ವಿಂಕಾ ರೋಸಿಯಾ ಮತ್ತಿತರ ಪಾತಿಯಲ್ಲಿ ನಾಟಿ ಮಾಡಲಾಗಿದೆ ಹಾಗೂ 1500 ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಮುಖ ಆಕರ್ಷಣೆಗಳು
ನಗರದ ಕೋಟೆಯ ಕಲಾಕೃತಿಯನ್ನು ಹೂವಿನಿಂದ ಅಂದಾಜು 15 ಅಡಿ ಎತ್ತರದಲ್ಲಿ ನಿರ್ಮಿಸಲಾಗುವದು. ಕಾವೇರಿ ಮಾತೆಯ ಮಂಟಪ, ತೀರ್ಥೋದ್ಭವದ ಕುಂಡಿಕೆಯ ಕಲಾಕೃತಿಯನ್ನು 8 ಅಡಿ ಎತ್ತರದಲ್ಲಿ 15 ಅಡಿ ಉದ್ದ ನಿರ್ಮಾಣ ಮಾಡಲಾಗುವದು. ಪಾಲಿಹೌಸ್, ನೆರಳುಪರದೆ ಮನೆ, ಕಿಚನ್ ಗಾರ್ಡನ್, ತಾರಸಿ ತೋಟ, ಮತ್ತಿತರ ಮಾದರಿ ಪ್ರದರ್ಶಿಸಲಾಗುವದು. ಕಾಡು ಪ್ರಾಣಿಗಳಾದ ಆನೆ, ಜಿಂಕೆ, ಹುಲಿ, ಮೊಲ, ಡಾಲ್ಫಿನ್ ಮತ್ತು ಚಿಟ್ಟೆಯ ಕಲಾಕೃತಿಗಳನ್ನು ಹೂ/ಅಲಂಕಾರಿ ಎಲೆಗಳಿಂದ ನಿರ್ಮಿಸಲಾಗುವದು ಎಂದು ತಿಳಿಸಿದರು.
ಮಕ್ಕಳಿಗೆ ಮನರಂಜನೆ ನೀಡುವಂತಹ ಸೈಕಲ್, ಫಾರ್ಮುಲಾ ಕಾರು ಮಾದರಿಯನ್ನು ತಯಾರಿಸಲಾಗುವದು. ಮಾವು, ಕಿತ್ತಳೆ, ಅನಾನಸ್ ಹಣ್ಣುಗಳ ಪೋಟೊ ಪ್ರೇಮ್ ಮಾದರಿಯ ಕಲಾಕೃತಿಗಳನ್ನು ನಿರ್ಮಿಸಲಾಗುವದು. ತರಕಾರಿ/ಹಣ್ಣುಗಳಲ್ಲಿ ಕೆತ್ತನೆಯ ಕಲಾಕೃತಿಗಳನ್ನು ನಿರ್ಮಿಸಲಾಗುವದು. ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನ ಹೂವಿನ ಜೋಡಣೆಯನ್ನು ಮಾಡಲಾಗುವದು. ಕುವೆಂಪುರವರು ಕವಿ ಶೈಲದಲ್ಲಿ ಕವನ ಬರೆಯುವ ಮಾದರಿ ಇರಲಿದೆ ಎಂದರು.
ಗಾಂಧಿ ಮೈದಾನದಲ್ಲಿ ವಿವಿಧ ಇಲಾಖೆಗಳಿಂದ ಹಾಗೂ ಖಾಸಗಿಯವರಿಂದ ವಸ್ತು ಪ್ರದರ್ಶನದ ಮಳಿಗೆಯನ್ನು ಆಯೋಜಿಸಲಾಗಿದೆ. ರೈತರು ಬೆಳೆದಿರುವಂತಹ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರ ಬೆಳೆಗಳ ಪ್ರದರ್ಶಿಕೆಯನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಅತ್ಯುತ್ತಮ ಪ್ರದರ್ಶಿಕೆಗಳಿಗೆ ಬಹುಮಾನ ನೀಡಲಾಗುವದು. ಆಸಕ್ತರು ತಾ. 9 ರಂದು ಬೆಳಿಗ್ಗೆ 10 ಗಂಟೆಗೆ ಗಾಂಧಿ ಮೈದಾನದಲ್ಲಿ ಪ್ರದರ್ಶಿಕೆಗಳನ್ನು ತಂದು ಹೆಸರನ್ನು ನೋಂದಾಯಿಸಿ ಕೊಳ್ಳಬೇಕಿದೆ ಎಂದರು.
ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಸಾರ್ವಜನಿಕರಿಗೆ ಒಣಹೂ ಜೋಡಣೆ, ಬಿಡಿಹೂಗಳ ಜೋಡಣೆ, ಇಕೆಬಾನ, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗುವದು. ಪ್ರದರ್ಶನದ ಅಂಗವಾಗಿ ಸಂಜೆ 6.30 ಗಂಟೆಗೆ ವಿವಿಧ ಸ್ಥಳೀಯ ತಂಡ ಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಏರ್ಪಡಿಸಲಾಗುವದು.
ಪ್ರದರ್ಶನದ ವೀಕ್ಷಣೆಗೆ ರೂ. 10ಗಳ ಪ್ರವೇಶ ಶುಲ್ಕ ಹಾಗೂ ಮಕ್ಕಳಿಗೆ ರೂ. 5 ಮತ್ತು ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ತೋಟ ಗಾರಿಕಾ ಇಲಾಖೆ ಉಪ ನಿರ್ದೇಶಕಿ ದೇವಕಿ, ಸಹಾಯಕ ನಿರ್ದೇಶಕ ಪ್ರಮೋದ್ ಇತರರು ಇದ್ದರು.