ಸೋಮವಾರಪೇಟೆ, ಮಾ. 7: ಗಣರಾಜ್ಯೋತ್ಸವ ಸಮಾರಂಭದಂದು ನಡೆದ ಘಟನೆಗೆ ಸಂಬಂಧಿಸಿದಂತೆ ಮಾದಾಪುರದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಗೊಂದಲ, ಗದ್ದಲ, ಧಿಕ್ಕಾರದ ಘೋಷಣೆಗಳು ಮೊಳಗಿದವು. ಒಂದು ಹಂತದಲ್ಲಿ ಆಕ್ರೋಶಿತರಾದ ಗ್ರಾಮಸ್ಥರು, ಸದಸ್ಯರೋರ್ವರನ್ನು ದೇಶದ್ರೋಹಿ ಎಂದು ಹೀಗಳೆದ ಪ್ರಸಂಗವೂ ನಡೆದವು.
ಮಾದಾಪುರ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಅಧ್ಯಕ್ಷೆ ಲತಾ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಗಣರಾಜ್ಯೋತ್ಸವ ದಿನದಂದು ಪಂಚಾಯಿತಿಯ ಅಧ್ಯಕ್ಷೆ ಲತಾ, ಸದಸ್ಯರುಗಳಾದ ಹೆಚ್.ಎಂ. ಸೋಮಪ್ಪ, ಪ್ರಸನ್ನಕುಮಾರ್, ಮಜೀದ್ ಅವರುಗಳು, ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೇ ಧ್ವಜಾರೋಹಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಎದುರು ಪ್ರತಿಭಟಿಸಿದ್ದರು.
ಈ ವಿಚಾರವನ್ನು ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ ಭಾಸ್ಕರ್ ಸಾಯಿ ಮತ್ತು ಉಮ್ಮರ್ ಸೇರಿದಂತೆ ಇತರರು, ಈ ಬಗ್ಗೆ ಸಮಜಾಯಿಷಿಕೆ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭ ವಿಧಾನಸೌಧದ ಎದುರೇ ಜನಪ್ರತಿನಿಧಿಗಳು ಪ್ರತಿಭಟನೆ ಮಾಡ್ತಾರೆ ಎಂದು ಸದಸ್ಯರು ತಮ್ಮ ಪರ ವಹಿಸಿ ಕೊಂಡರು. ಸದಸ್ಯರಾದ ನೀವುಗಳೇ ಹೀಗೆ ಪ್ರತಿಭಟನೆ ಮಾಡುವದು ಸರಿಯಲ್ಲ. ಒಂದು ವೇಳೆ ಧ್ವಜಾರೋಹಣ ಮಾಡದಿದ್ದರೆ ಪ್ರತಿಭಟಿಸಬಹುದಿತ್ತು. ಗಣ ರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿದರೂ ರಾಷ್ಟ್ರಧ್ವಜಕ್ಕೆ ಗೌರವ ನೀಡದೇ ಪ್ರತಿಭಟಿಸಿದ್ದು ಸರಿಯಲ್ಲ ಎಂದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಸದಸ್ಯರೋರ್ವ ರನ್ನು ಕುರಿತು ಕೆಲವರು ‘ದೇಶದ್ರೋಹಿ’ ಎಂಬ ಪದ ಪ್ರಯೋಗಿಸಿದರು. ಇದರಿಂದಾಗಿ ಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು. ಸದಸ್ಯ ಮತ್ತು ಸಭೆಯಲ್ಲಿದ್ದವರ ನಡುವೆ ತಳ್ಳಾಟ, ನೂಕಾಟ ನಡೆಯಿತು.
ಈ ಮಧ್ಯೆ ಗ್ರಾ.ಪಂ. ಮಾಜಿ ಅಧ್ಯಕ್ಷ ಭಾಸ್ಕರ್ ವಿರುದ್ಧ ‘ಅಟ್ರಾಸಿಟಿ ಕೇಸ್ ಹಾಕ್ತೇವೆ, ನಿನ್ನ ನೋಡ್ಕೋತೀವಿ’ ಎಂದು ಕೆಲ ಸದಸ್ಯರು ಧಮಕಿ ಹಾಕಿದ ಘಟನೆಯೂ ನಡೆಯಿತು.
ಆಶ್ರಯ ಮನೆ ಯೋಜನೆಯಡಿ ಫಲಾನುಭವಿಗಳಿಗೆ ಮನೆ ವಿತರಿಸಲು ತಲಾ 25 ಸಾವಿರ ಹಣವನ್ನು ಕೆಲ ಸದಸ್ಯರು ಪಡೆದಿದ್ದಾರೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಸಭೆಯಲ್ಲಿ ಉಪಸ್ಥಿತರಿದ್ದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು ಈ ವಿಷಯ ಸಭೆಯ ಮುಂದಿಟ್ಟರು. ಹಣ ಪಡೆದ ಬಗ್ಗೆ ತೀವ್ರಗತಿಯ ಚರ್ಚೆ ನಡೆಯಿತು.
‘ಬಡ ಫಲಾನುಭವಿಗಳಿಂದ ಹಣ ಪಡೆಯುವ ಬದಲು ರಸ್ತೆಯಲ್ಲಿ ಬಟ್ಟೆ ಹಾಸಿ ಕೂತ್ಕೊಂಡ್ರೆ ಎಲ್ಲರೂ 500 ರಂತೆ ಹಣ ಹಾಕ್ತಾರೆ’ ಎಂದು ಕೆಲವರು ಛೇಡಿಸಿದರು. ಮನೆಗೆ ಫಲಾನುಭವಿ ಗಳನ್ನು ಗ್ರಾಮ ಸಭೆಯಲ್ಲೇ ಆಯ್ಕೆ ಮಾಡಲಾಗುವದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ ತಿಳಿಸಿದರು.
ಗ್ರಾಮ ಪಂಚಾಯಿತಿಯಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಗ್ರಾಮ ಪಂಚಾಯಿತಿ ಯಿಂದ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತಾ.ಪಂ. ಹಾಗೂ ಜಿ.ಪಂ. ಸದಸ್ಯರ ಗಮನಕ್ಕೂ ತನ್ನಿ. ರಾಜಕೀಯವನ್ನು ಬದಿಗೊತ್ತಿ ಜನತೆಯ ಸಮಸ್ಯೆ ಬಗೆಹರಿಸಲು ಎಲ್ಲರೂ ಮುಂದಾಗಬೇಕು. ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸಭೆಯಲ್ಲಿದ್ದ ಜಿ.ಪಂ. ಸದಸ್ಯೆ ಕುಮುದ ಧರ್ಮಪ್ಪ ಹೇಳಿದರು.
ಗ್ರಾ. ಪಂ. ಸದಸ್ಯರೋರ್ವರು ಹೊಳೆ ದಡವನ್ನು ಅತಿಕ್ರಮಿಸಿಕೊಂಡು ತನ್ನ ಹಾಗೂ ತನ್ನ ಸಹೋದರನ ಮನೆಗೆ ಮುಖ್ಯಮಂತಿಗಳ ವಿಶೇಷ ಪ್ಯಾಕೇಜ್ನಿಂದ ತಡೆಗೋಡೆ ಮಾಡಿಸಿಕೊಂಡಿದ್ದಾರೆ. ಜನತೆಯ ಸಮಸ್ಯೆ ಬಗೆಹರಿಸುವದಕ್ಕಿಂತ ತನ್ನ ಮನೆಗೆ ಸೌಕರ್ಯ ಒದಗಿಸಿ ಕೊಳ್ಳುವದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು. ಈ ಬಗ್ಗೆ ಚರ್ಚೆ ನಡೆದು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿ ಅವರಿಂದ ಪರಿಶೀಲನೆ ನಡೆಸಲು ಸಭೆಯಲ್ಲಿ ತೀರ್ಮಾನಿಸ ಲಾಯಿತು.
ಒಟ್ಟಾರೆ ಮಾದಾಪುರ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಆರಂಭದಿಂದ ಅಂತ್ಯದವರೆಗೂ ಪರಸ್ಪರ ಆರೋಪ-ಪ್ರತ್ಯಾರೋಪ ಗಳಿಂದಲೇ ಮುಕ್ತಾಯಗೊಂಡಿತು.