ಸೋಮವಾರಪೇಟೆ, ಮಾ. 6: ನೆಹರು ಯುವಕೇಂದ್ರ, ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ, ಹಾರಳ್ಳಿ ಬೀಟಿಕಟ್ಟೆ ಡಾ. ಅಂಬೇಡ್ಕರ್ ಯುವಕ ಸಂಘದಲ್ಲಿ ಆಶ್ರಯದಲ್ಲಿ ಅಂಬೇಡ್ಕರ್ ಸಮುದಾಯ ಭವನದಲ್ಲಿ “ನೆರೆಹೊರೆ ಯುವ ಸಂಪತ್ತು” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಡಿ. ಹರೀಶ್, ಯುವ ಸಂಪತ್ತು ದೇಶದ ನಿಜವಾದ ಸಂಪತ್ತು. ದೇಶದ ಅಭಿವೃದ್ಧಿಯಲ್ಲಿ ಇದು ಸದ್ಬಳಕೆಯಾಗಬೇಕಿದೆ. ಯುವಕ, ಯುವತಿಯರು ಮಂಡಳಿಗಳ ಸ್ಥಾಪನೆಯ ಮೂಲಕ ಕೌಶಲ್ಯಾಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ 1500 ಯುವಕ ಸಂಘಗಳು ಹಾಗೂ ಯುವತಿ ಮಂಡಳಿಗಳಿವೆ. ಆದರೆ 450 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ ಸಂಘಗಳು ಕಾರ್ಯ ಪ್ರವೃತ್ತರಾಗಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಬಿ.ಎಸ್. ಕುಮಾರ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಶೋಭರಾಜ್, ಶನಿವಾರಸಂತೆಯ ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹೂವಯ್ಯ, ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ ಉಪನ್ಯಾಸಕ ಜಯಕುಮಾರ್, ಸಂಘದ ಮಾಜಿ ಅಧ್ಯಕ್ಷರುಗಳಾದ ಹನುಮಯ್ಯ, ಟಿ.ಆರ್. ರಾಮಚಂದ್ರ, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಮಹೇಶ್, ಹಿರಿಯ ಆರೋಗ್ಯ ಸಹಾಯಕಿ ಕೆ.ಪಿ. ಪಾರ್ವತಿ ಮತ್ತಿತರರು ಇದ್ದರು.