ಸಿದ್ದಾಪುರ, ಮಾ. 6 : ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಖಚಿತ ಸುಳಿವಿನ ಮೇರೆಗೆ ಪೊಲೀಸ್ ಹಾಗೂ ಕಂದಾಯ ಇಲಾಖಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೆಗುಂದ ಅರಣ್ಯ ಪ್ರದೇಶದೊಳಗೆ ಅವರೆಗುಂದ ನಿವಾಸಿಯಾಗಿರುವ (ಮೊದಲ ಪುಟದಿಂದ) ಹಾಲಪ್ಪ (47) ಎಂಬಾತ ಮನೆಯ ಸಮೀಪದಲ್ಲೇ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಪೊಲೀಸ್ ಇಲಾಖೆಯ ಮಡಿಕೇರಿ ವಿಭಾಗ ಡಿ.ವೈ.ಎಸ್.ಪಿ. ಸುಂದರ್‍ರಾಜ್ ಹಾಗೂ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜ್ ಧಾಳಿ ನಡೆಸಿ ಹಾಲಪ್ಪ ಬೆಳೆದಿದ್ದ ಅಂದಾಜು 2 ಅಡಿ ಎತ್ತರದ 75 ಗಿಡಗಳು ಹಾಗೂ 18 ಸಣ್ಣ ಗಿಡಗಳನ್ನು ಪತ್ತೆ ಹಚ್ಚಿದರು. ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಹಾಲಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸಿ.ಐ. ಮೇದಪ್ಪ, ಠಾಣಾಧಿಕಾರಿ ಸುಬ್ರಮಣ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳು ಹಾಜರಿದ್ದರು.