ಮಡಿಕೇರಿ, ಮಾ. 6: ಪ್ರತಿಯೊಬ್ಬ ಮಾನವ ಜೀವಿಗೆ ಗಾಳಿ, ಬೆಳಕು ಮತ್ತು ನೀರು ಅತಿ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವತ್ತ ಗಮನಹರಿಸಬೇಕಿದೆ ಎಂದು ಜಿ.ಪಂ. ಉಪ ಕಾರ್ಯದರ್ಶಿಯಾದ ಸಿದ್ದಲಿಂಗ ಮೂರ್ತಿ ಅವರು ಕರೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಗರದ ಅರಸು ಭವನದಲ್ಲಿ ನಡೆದ 2017-18ನೇ ಸಾಲಿನ ಕೊಡಗು ಜಿಲ್ಲಾ ಮಟ್ಟದ ‘ಪರಿಸರ ಮಿತ್ರ’ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನೀರಿನ ಕೊರತೆ ಮುಂದಿನ ದಿನಗಳಲ್ಲಿ ಬರಬಹುದು. ನೀರಿಲ್ಲ ಅಂದ್ರೆ ಜೀವಿಗಳು ಭೂಮಿ ಮೇಲೆ ಬದುಕಲು ಸಾದ್ಯವಿಲ್ಲ. ಹಿಂದೆ ಕೆರೆ ಕಟ್ಟೆ ನೀರು ಶುದ್ಧವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆರೆ-ಕಟ್ಟೆ ನೀರು ಕಶ್ಮಲಗೊಳಿಸಿದ್ದಾನೆ. ಭೂಮಿ ಮೇಲೆ ಶೇ 75 ಭಾಗ ನೀರಿದೆ ಕುಡಿಯಲು ಯೋಗ್ಯವಾದ ನೀರು ಶೇ 20ರಷ್ಟು ಮಾತ್ರ ಅದನ್ನು ಸರಿಯಾಗಿ ಬಳಕೆ ಮಾಡಿ ಎಂದು ಹೇಳಿದರು.

ಶಾಲಾ ಮಕ್ಕಳು ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪರಿಸರ ಕಾಳಜಿ ಬೆಳೆಸಲು ಸಹಕಾರಿಯಾಗಬೇಕು. ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರ ಕಲ್ಪನೆಯೊಂದಿಗೆ ಜೀವಜಲ ಹಾಗೂ ಜೀವ ವೈವಿಧ್ಯತೆ ಬಗ್ಗೆ ಹೆಚ್ಚಿನ ಜ್ಞಾನ ತಿಳಿದುಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಎ. ಉದಯಕುಮಾರ್ ಅವರು ‘ಪರಿಸರ ಮಿತ್ರ’ ಶಾಲೆಗಳ ಪರಿಸರ ಚಟುವಟಿಕೆಗಳ ಕುರಿತಂತೆ ಹೊರತಂದಿರುವ ‘ಹಸಿರು-ನನಸಾದ ಕನಸು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಹಿಂದೆ ನಾವು ಸಾಕಷ್ಟು ನೀರನ್ನು ವ್ಯರ್ಥ ಮಾಡಿದ್ದೇವೆ. ಅದರ ಮೌಲ್ಯ ಗೊತ್ತಾಗೋದು ಹಣ ಕೊಟ್ಟು ನೀರು ಕುಡಿಯುವಾಗ. ಬಣ್ಣ ರಹಿತ ಗಣೇಶನನ್ನು ಬಳಸಿ ಪರಿಸರವನ್ನು ಉಳಿಸುವದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಹಾಗೆಯೇ ಪರಿಸರ ರಕ್ಷಣೆ ಕುರಿತಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮನದಟ್ಟುಮಾಡಬೇಕು ಹಾಗೆಯೇ ಶಾಲಾ ಪರಿಸರ, ನೀರು, ತ್ಯಾಜ್ಯ ನಿರ್ವಹಣೆ, ಆರೋಗ್ಯ ಮತ್ತು ನೈರ್ಮಲ್ಯ ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ಮಕ್ಕಳು ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು ಸಹಕಾರಿಯಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ ಪಶ್ಚಿಮ ಘಟ್ಟ ಅವನತಿಯಾಗುತ್ತಿದೆ. ಕೊಡಗಿನ ಜೀವ ನದಿಯು ಸಹ ಕಲುಷಿತ ಗೊಂಡು ಅಂತರ್ಜಲ ಬರಿದಾಗುತ್ತಿದೆ ಶಾಲೆಯಲ್ಲಿ ಶಿಕ್ಷಕರು ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಗಿಡಮರ ಬೆಳಸುವದರ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಪರಿಸರ ಅಧಿಕಾರಿ ಜಿ.ಆರ್. ಗಣೇಶ್ ಪ್ರಾಸ್ತವಿಕವಾಗಿ ಮಾತನಾಡಿ ಹವಾಮಾನ ವೈಪರೀತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ; ಅತಿಯಾದ ಉಷ್ಣಾಂಶ ಪರಿಸರದಲ್ಲಿ ಏರುಪೇರಾಗುತ್ತಿದೆ; ಮಕ್ಕಳ ಮೂಲಕ ಪರಿಸರ ಚಟುವಟಿಕೆ ಪರಿಸರ ಸಂರಕ್ಷಣೆಯ ಕಲ್ಪನೆ ಮೂಡಿಸಬೇಕು ಎಂದು ತಿಳಿಸಿದರು.

ಪರಿಸರ ಮಿತ್ರ ಪ್ರಶಸ್ತಿಗೆ 172 ಶಾಲೆಗಳು ಭಾಗವಹಿಸಿದ್ದವು ಅದರಲ್ಲಿ 21 ಶಾಲೆಗಳನ್ನು ಗುರುತಿಸಲಾಗಿದೆ ಪ್ರಥಮ ಸ್ಥಾನ ಪಾರಾಣೆ ಪ್ರೌಢಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ, ಹಸಿರು ಶಾಲಾ ಪ್ರಶಸ್ತಿ 10 ಶಾಲೆಗೆ. ಹಳದಿ ಶಾಲಾ ಪ್ರಶಸ್ತಿ 10 ಶಾಲೆಗೆ ನೀಡಲಾಗಿದೆ ಎಂದು ತಿಳಿಸಿದರು.

ಡಿಡಿಪಿಐ ಮಂಜುಳಾ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರತಿಯೊಬ್ಬರೂ ಪರಿಸರ ಕಾಳಜಿಯನ್ನು ಕಾಯ್ದುಕೊಂಡು ಪರಿಸರ ಸಮತೋಲನ ಕಾಪಾಡಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ. ಶಾಲಾ ಮಕ್ಕಳಲ್ಲಿ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿರುವ ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಈ ಬಾರಿ ಜಿಲ್ಲೆಯ 172 ಶಾಲೆಗಳು ಪರಿಸರ ಮಿತ್ರ ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಿರುವದು ಹೆಮ್ಮೆಯ ಸಂಗತಿ. ಮಾನವ ಸಂಕುಲದ ಜತೆಗೆ ಇಡೀ ಜೀವಿ ಸಂಕುಲದ ಉಳಿವಿಗೆ ನಾವು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಕಾಡಿನ ರಕ್ಷಣೆ ಮೂಲಕ ಪರಿಸರ ರಕ್ಷಿಸಬೇಕಿದೆ ಎಂದು ಅವರು ಹೇಳಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಪ್ರಾಂಶುಪಾಲ ವಾಲ್ಟರ್ ಎಚ್.ಡಿ’ಮೆಲ್ಲೊ ಮಾತನಾಡಿ, ಪರಿಸರ ಮಿತ್ರ ಶಾಲಾ ಕಾರ್ಯಕ್ರಮವು ಶಾಲಾ ಮಕ್ಕಳಲ್ಲಿ ಪರಿಸರ ಉಳಿಸಿ ಬೆಳೆಸುವ ವೈವಿಧ್ಯಮಯ ಕಾರ್ಯಕ್ರಮವಾಗಿದೆ. ಇಂದು ಪರಿಸರದ ವಿಷಯಗಳು ಅತ್ಯಂತ ಮಹತ್ವ ಪಡೆಯುತ್ತಿವೆ. ನಾವು ಮಕ್ಕಳಲ್ಲಿ ಗಿಡ ನೆಟ್ಟು, ಅವುಗಳನ್ನು ಪೋಷಿಸಿ ಮರಗಳಾಗುವಂತೆ ಪರಿಸರದ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ, ಜಿಲ್ಲಾ ಬಿಸಿಎಂ ಅಧಿಕಾರಿ ಕೆ.ವಿ.ಸುರೇಶ್, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್.ವೆಂಕಟನಾಯಕ್, ಉಪ ಪರಿಸರ ಅಧಿಕಾರಿ ಡಾ.ಎಂ.ಕೆ.ಸುಧಾ, ಸಹಾಯಕ ಪರಿಸರ ಅಧಿಕಾರಿ ಉಮ್ಮೇ ಹಮೀದ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಪಾರಾಣೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕರಾದ ಸಿ.ಎಸ್. ಸುರೇಶ್ ನಿರೂಪಣೆ ಮಾಡಿದರು, ಪಿ.ಎಸ್. ರವಿಕೃಷ್ಣ ಸ್ವಾಗತಿಸಿದರು. ಜಿ.ಶ್ರೀಹರ್ಷ ವಂದಿಸಿದರು. ಶಿಕ್ಷಕಿ ವೈ.ಪ್ರಮೀಳಾಕುಮಾರಿ ಪ್ರಾರ್ಥಿಸಿ ದರು. ವಿವಿಧ ಶಾಲಾ ಮಕ್ಕಳು ಪರಿಸರ ಗೀತೆ ಹಾಡಿದರು.

ಉತ್ತಮ ಶಾಲಾ ಪರಿಸರ ಚಟುವಟಿಕೆಗಳನ್ನು ಹೊಂದಿರುವ ಮಡಿಕೇರಿ ತಾಲೂಕಿನ ಪಾರಾಣೆ ಪ್ರೌಢಶಾಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನೀಡಲ್ಪಡುವ ಈ ಸಾಲಿನ ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಯನ್ನು ಪಡೆದು ಕೊಂಡಿದ್ದು, ಪ್ರಶಸ್ತಿಯೊಂದಿಗೆ ರೂ. 30 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ ವಿತರಿಸಲಾಯಿತು.

ಈ ಸಂದರ್ಭ ಶಾಲೆಯಲ್ಲಿ ಉತ್ತಮ ಪರಿಸರ ಚಟುವಟಿಕೆ ಕೈಗೊಂಡ 10 ಶಾಲೆಗಳಿಗೆ ಹಸಿರು ಶಾಲಾ ಪ್ರಶಸ್ತಿಯೊಂದಿಗೆ ತಲಾ ರೂ. 5 ಸಾವಿರ ನಗದು ಬಹುಮಾನ ಹಾಗೂ 10 ಶಾಲೆಗಳಿಗೆ ಹಳದಿ ಶಾಲಾ ಪ್ರಶಸ್ತಿಯೊಂದಿಗೆ ರೂ. 4 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.