ವೀರಾಜಪೇಟೆ, ಮಾ. 6: ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್ ಆಡಳಿತ ನಡೆಸುವದರಲ್ಲಿ ವಿಫಲವಾಗಿದ್ದು ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಗರ ಜೆಡಿಎಸ್ ಅಧ್ಯಕ್ಷ ಪಿ.ಎ ಮಂಜುನಾಥ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಡಳಿತ ಪಕ್ಷದ ಸದಸ್ಯರು ಅಧ್ಯಕ್ಷರ ಕಾರ್ಯ ವೈಖರಿಯ ಮೇಲೆ ವಿಶ್ವಾಸ ಕಳೆದು ಕೊಂಡಿದ್ದಾರೆ. ತಾ. 3 ರಂದು ನಡೆದ ಮಾಸಿಕ ಸಭೆಯಲ್ಲಿ ಕೋರಂ ನೆಪ ಹೇಳಿ ಸಭೆಯನ್ನು ಮುಂದೂಡಿದ್ದಾರೆ. ಸದಸ್ಯರು ಕುಶಾಲನಗರದಲ್ಲಿ ನಡೆದ ಸುರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಪಟ್ಟಣದ ಜನಗಳಿಂದ ಆಯ್ಕೆಯಾದ ಇವರುಗಳಿಂದ ಪಟ್ಟಣದ ಸಮಸ್ಯೆಗಳನ್ನು ಬಹೆಹರಿಸುವ ಮಾಸಿಕ ಸಭೆಗಳು ಅವಶ್ಯಕತೆ ಇಲ್ಲ. ಅಂದಿನ ಸಭೆಯಲ್ಲಿ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳು ಇದ್ದವು. ಅಧ್ಯಕ್ಷರು ಜೆಡಿಎಸ್ ಅಥವಾ ಕಾಂಗ್ರೆಸ್‍ನ ಒರ್ವ ಸದಸ್ಯರು ಸಭೆಗೆ ಹಾಜಾರಾಗಿದ್ದರೆ ಸಭೆಗೆ ಕೋರಂ ಬರುತ್ತಿತ್ತು ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳನ್ನು ಗಮನಿಸಿದಾಗ ಅಧ್ಯಕ್ಷರು ಆಡಳಿತ ಪಕ್ಷದ ವಿಶ್ವಾಸ ಕಳೆದುಕೊಂಡಿರುವದನ್ನು ಅವರೇ ಒಪ್ಪಿಕೊಂಡಂತಾಗಿದೆ.

ಕಳೆದ ಎರಡು ತಿಂಗಳ ಹಿಂದೆಯೇ ಪಟ್ಟಣದ ಸುತ್ತಮುತ್ತ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದಾರೆ. ಬೆಳಕು ನೀಡಲು ಎಲ್ಲಾ ಸಲಕರಣೆಗಳು ಕಚೇರಿಯಲ್ಲಿ ಲಭ್ಯ ಇದ್ದರೂ ಕೂಡ ಕಾಮಾಗಾರಿ ನಡೆಯುತ್ತಿಲ್ಲ. 2003 ರಲ್ಲಿ ಒಳಚೆರಂಡಿ ಹಾಗೂ ನಗರ ನೀರು ಸರಬರಾಜು ಯೋಜನೆ ಅಡಿಯಲ್ಲಿ 7 ಕೋಟಿ ರೂ ವೆಚ್ಚ ಮಾಡಿ ಬೇತ್ರಿಯಿಂದ ವೀರಾಜಪೇಟೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಬೇಸಿಗೆ ಪ್ರಾರಂಭವಾಗುತ್ತಿರುವಂತೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಮೂಲಭೂತ ಸೌಕರ್ಯಗಳಿಗೆ ಗಮನ ಕೊಡದ ಪಂಚಾಯಿತಿ ಸಂಪೂರ್ಣ ನಿಷ್ಕ್ರೀಯಗೊಂಡಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಯುವ ಘಟಕ ವೀರಾಜಪೇಟೆ ಅಧ್ಯಕ್ಷ ಚಿಲ್ಲವಂಡ ಗಣಪತಿ, ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷ ಯಾಕಿಬ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಕುಯ್ಮಿಂಡ ರಾಕೇಶ್ ಬಿದ್ದಪ್ಪ, ಪರಿಶಿಷ್ಟ ಜಾತಿ ಮತ್ತು ಪಂಗಡದ ನಗರ ಅಧ್ಯಕ್ಷೆ ಮುತ್ತಮ್ಮ ಉಪಸ್ಥಿತರಿದ್ದರು.