ಗೋಣಿಕೊಪ್ಪಲು, ಮಾ. 6: ಕೊಡಗಿನಲ್ಲಿ ಒಂದೆಡೆ ಮನೆ ನುಗ್ಗಿ ಕಳವು ಮತ್ತಿತರ ಅಪರಾಧ ಪ್ರಕರಣ ಅಧಿಕವಾಗುತ್ತಿದ್ದು, ಗೃಹ ಇಲಾಖೆಯೇ ಇದರ ನೇರ ಹೊಣೆ ಹೊರಬೇಕು. ವರ್ಷಂಪ್ರತಿ ಹೆಚ್ಚುತ್ತಿರುವ ಕಾಡ್ಗಿಚ್ಚು ಪ್ರಕರಣ, ಹುಲಿ ಧಾಳಿ, ಆನೆ-ಮಾನವ ಸಂಘರ್ಷ, ವಿಧಾನ ಸಭಾ ಅಧಿವೇಶನಕ್ಕೆ ಅರಣ್ಯ ಸಚಿವ ರಮಾನಾಥ ರೈ ಅವರ ನಿರಂತರ ಗೈರು. ಇದರಿಂದಾಗಿ ಜಿಲ್ಲೆಯಲ್ಲಿ ಅಶಾಂತಿಗೆ ಕಾರಣವಾಗಿದೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಅರಣ್ಯ ಸಚಿವ ರಮಾನಾಥ ರೈ ರಾಜೀನಾಮೆ ನೀಡಲಿ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಒತ್ತಾಯಿಸಿದ್ದಾರೆ.
ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿನ ಶಾಸಕರ ಕಚೇರಿಯಲ್ಲಿ ಬೋಪಯ್ಯ ಅವರು ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚೆಗೆ ದಕ್ಷಿಣ ಕೊಡಗಿನ ಮಾಯಮುಡಿ, ತೆರಾಲು, ವೆಸ್ಟ್ ನೆಮ್ಮಲೆ, ನಲ್ಲೂರು, ಕೊಟ್ಟಗೇರಿ, ಕುಮಟೂರು ಇತ್ಯಾದಿ ಕಡೆಗಳಲ್ಲಿ ಅಭಯಾರಣ್ಯದಿಂದ ನುಸುಳಿದ ಹುಲಿಗಳು ಜಾನುವಾರುಗಳನ್ನು ಬಲಿತೆಗೆದುಕೊಳ್ಳುತ್ತಿವೆ. ಒಂದು ಹಸು ವನ್ಯಪ್ರಾಣಿಯಿಂದ ಅಸುನೀಗಿದರೆ ಕನಿಷ್ಟ ರೂ. 35 ಸಾವಿರ ಪರಿಹಾರ ನೀಡಬೇಕು. ಇದೀಗ ಕೇವಲ ರೂ. 10 ಸಾವಿರ ಮೊತ್ತ ನೀಡುತ್ತಿದ್ದು, ರೈತರಿಗೆ ಏನೇನೂ ಸಾಲದು. ತಾನು ‘ಸ್ಪೀಕರ್’ ಆಗಿದ್ದ ಅವಧಿಯಲ್ಲಿ ಹುಲಿ ಧಾಳಿಯಿಂದ ಜಾನುವಾರು ಸತ್ತಾಗ ಕಾನೂರು, ಕೋತೂರು, ಹುದಿಕೇರಿ ವ್ಯಾಪ್ತಿಯ ರೈತರಿಗೆ ರೂ. 30 ಸಾವಿರದವರೆಗೂ ಪರಿಹಾರ ನೀಡಲಾಗಿದೆ.
ಇತ್ತೀಚೆಗೆ ಮುಗಿದ ಬಜೆಟ್ ಮೇಲಿನ ವಿಧಾನಸಭಾ ಅಧಿವೇಶನದಲ್ಲಿ ಅರಣ್ಯ ಸಚಿವ ರಮಾನಾಥ ರೈ ಅವರು ಒಂದು ದಿನವೂ ಹಾಜರಾಗದೆ ಬೇಜವಾಬ್ದಾರಿ ಪ್ರದರ್ಶನ ಮಾಡಿದ್ದಾರೆ. ಕಳೆದ ವಿಧಾನಸಭಾ ಅಧಿವೇಶನ ಸಂದರ್ಭವೇ ಕಾಡ್ಗಿಚ್ಚು ನಿಯಂತ್ರಣದ ಬಗ್ಗೆ ಪ್ರಸ್ತಾಪಿಸಿ, ಕ್ರಮಕ್ಕೆ ಒತ್ತಾಯಿಸಿದ್ದೆ. ಇದೀಗ ನಾಗರಹೊಳೆ ಹುಲಿ ಯೋಜನೆಯ ಸಿಎಫ್ ಮಣಿಕಂಠನ್ ಸಲಗದ ಧಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ವಲಯಾರಣ್ಯಾಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಕುಶಾಲನಗರ ಸಮೀಪ ಆನೆಕಾಡು, ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿಯೂ ಈ ಬಾರಿ ಫೆಬ್ರವರಿಯಲ್ಲಿಯೇ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಫೈರ್ ಲೈನ್ ಕಾರ್ಯಗಳು ಬೇಸಿಗೆಯಲ್ಲಿ ಸರಿಯಾದ ಕ್ರಮದಲ್ಲಿ ನಡೆಯುತ್ತಿಲ್ಲ. ಈವರೆಗೆ ಕಾಡ್ಗಿಚ್ಚು ಪ್ರಕರಣದಲ್ಲಿ ಶಾಮೀಲಾದವರ ಮೇಲೆ ಯಾವದೇ ಕ್ರಮ ಜರುಗಿಸಿಲ್ಲ. ನಿರಂತರ ಬೆಂಕಿ ಪ್ರಕರಣಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದರು.
ರೈಲ್ವೆ ಕಂಬಿ ಅಳವಡಿಸಲು ಮೀನಾಮೇಷ!
ನಾಗರಹೊಳೆ ಅಭಯಾರಣ್ಯ ಒಳಗೊಂಡಂತೆ, ವನ್ಯಜೀವಿ ವಲಯದಿಂದ ಕಾಡಾನೆಗಳು ಗ್ರಾಮೀಣ ಭಾಗಕ್ಕೆ ನುಸುಳದಂತೆ ಸರಹದ್ದಿನಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸುವದು ಉತ್ತಮ ಯೋಜನೆಯಾಗಿದೆ. ಆದರೆ, ಮುಂಗಡ ಪತ್ರದಲ್ಲಿ ರೈಲ್ವೇ ಕಂಬಿ ಅಳವಡಿಸಲು ರೂ. 14 ಕೋಟಿ ಬಿಡುಗಡೆಯಾಗಿದ್ದರೂ, ರೈಲ್ವೆ ಬೋರ್ಡ್‍ಗೆ ಮುಂಗಡವಾಗಿ ರೂ. 5 ಕೋಟಿ ನೀಡಲು ಅವಕಾಶವಿಲ್ಲ ಎಂದು ಇಲಾಖಾಧಿಕಾರಿಗಳು ಹೇಳುತ್ತಿದ್ದಾರೆ. ಈ ಬಾರಿ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಉತ್ತರಿಸಲು ಯಾವದೇ ಅಧಿಕಾರಿಗಳಿಲ್ಲ. ಇದೀಗ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್ ಅವರ ಗಮನ ಸೆಳೆದ ನಂತರ ರೂ. 14 ಕೋಟಿ ಮಂಜೂರಾತಿ ಆದೇಶ ಸಿಕ್ಕಿದೆ. ಆನೆ ನುಸುಳುವ ವನ್ಯಜೀವಿ ವಲಯದ ಸರಹದ್ದಿನಲ್ಲಿ ರೈಲ್ವೆ ಕಂಬಿ ಅಳವಡಿಸುವ ಕಾರ್ಯ ಇನ್ನಾದರೂ ಚುರುಕುಗೊಳ್ಳಬೇಕು ಎಂದು ಹೇಳಿದರಲ್ಲದೆ ಅರಣ್ಯ ಅಧಿಕಾರಿ ಸಾವಿಗೆ ಕಾರ್ಯಕ್ರಮ ಅನುಷ್ಠಾನದ ವಿಳಂಬ ಧೋರಣೆಯೇ ಕಾರಣ. ಈ ನಿಟ್ಟಿನಲ್ಲಿ ವೈಫಲ್ಯತೆಯ ಹೊಣೆಹೊತ್ತು ಅರಣ್ಯ ಸಚಿವ ರಮಾನಾಥ ರೈ ರಾಜೀನಾಮೆ ನೀಡಲಿ ಎಂದು ಶಾಸಕ ಬೋಪಯ್ಯ ಒತ್ತಾಯಿಸಿದರು.
ಗೃಹ ಇಲಾಖೆ ವೈಫಲ್ಯ
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಮನೆ ಕಳವು, ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದರೂ ಪ್ರಕರಣ ಬೇಧಿಸುವಲ್ಲಿ ಪೆÇಲೀಸ್ ಇಲಾಖೆ ವೈಫಲ್ಯವಾಗಿದೆ. ನೆರೆಯ ಕೇರಳ ಮೂಲದ ಒಂದು ವರ್ಗದ ಆರೋಪಿಗಳೇ ಇಂತಹ ಪ್ರಕರಣದಲ್ಲಿ ಅಧಿಕವಾಗಿ ಶಾಮೀಲಾಗಿದ್ದಾರೆ. ಬೆಕ್ಕೆಸೊಡ್ಲೂರುವಿನಲ್ಲಿ ಇತ್ತೀಚೆಗೆ ಕೇರಳ ಮೂಲದ ಕಾಫಿ ಹಾಗೂ ಕಾಳುಮೆಣಸು ವ್ಯಾಪಾರಿ ಕೃಷಿಕರಿಗೆ ಸುಮಾರು ರೂ. 4 ಕೋಟಿ ವಂಚಿಸಿ ಪರಾರಿಯಾಗಿದ್ದು ಪೆÇಲೀಸರು ಇನ್ನೂ ಬಂಧಿಸಿರುವದಿಲ್ಲ. ಯಾವದೇ ಕಳವು ಆರೋಪಿಗಳನ್ನು ಪತ್ತೆಹಚ್ಚುವಲ್ಲಿಯೂ ಇಲಾಖೆ ವಿಫಲವಾಗಿದೆ. ಗೃಹ ಸಚಿವ ರಾಮಲಿಂಗಾ ರೆಡ್ಡಿ ನಿಯಂತ್ರಣದಲ್ಲಿ ಗೃಹ ಇಲಾಖೆ ಇಲ್ಲ. ಸಂಬಂಧವಿಲ್ಲದ ವ್ಯಕ್ತಿಯ ಹಸ್ತಕ್ಷೇಪದಿಂದಾಗಿ ಪೆÇಲೀಸರ ಮನೋಬಲವೂ ಕುಗ್ಗುವಂತಾಗಿದೆ. ಈ ನಿಟ್ಟಿನಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆಗೆ ಒತ್ತಾಯಿಸುತ್ತಿರುವದಾಗಿ ಬೋಪಯ್ಯ ತಿಳಿಸಿದ್ದಾರೆ.
- ಟಿ.ಎಲ್. ಶ್ರೀನಿವಾಸ್/ ಎನ್.ಎನ್. ದಿನೇಶ್.