ವೀರಾಜಪೇಟೆ, ಮಾ. 5: ಕಾರ್ಯಕರ್ತರು ಪಕ್ಷದ ಬೆನ್ನೆಲುಬು. ಕಾರ್ಯಕರ್ತರ ಶ್ರಮದಿಂದ ಪಕ್ಷದ ಬೆಳವಣಿಗೆ ಸಾಧ್ಯ ಎಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಪ್ರದೀಪ್ ಕುಮಾರ್ ಹೇಳಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬೂತ್ ಹಾಗೂ ವಲಯಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಚುನಾವಣಾ ವೀಕ್ಷಕರಾಗಿ ಆಗಮಿಸಿ ಮಾತನಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರದ ರೈತ ಭಾಗ್ಯ ಎಂಬ ಕಾರ್ಯಕ್ರಮದಿಂದ ರೈತರಿಗೆ ಹಲವು ರೀತಿಯಲ್ಲಿ ವರದಾಯಕವಾಗಿ ಪರಿಣಮಿಸಿದೆ ಎಂದರು.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಮತ್ತು ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಮಾತನಾಡಿದರು. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಕಾನೂನು ಘಟಕದ ಮುಖಂಡ ಡಿ.ಸಿ. ಧ್ರುವ ಕುಮಾರ್, ತಾ. ಪಂ. ಸದಸ್ಯ ಮಾಳೇಟಿರ ಪ್ರಶಾಂತ್, ಅರ್ಜಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಗಾಯತ್ರಿ ರವಿ ಹಾಗೂ ಬೋಪಣ್ಣ ಉಪಸ್ಥಿತರಿದ್ದರು.