ಸೋಮವಾರಪೇಟೆ,ಮಾ.5: ಕಳೆದ 20 ದಿನಗಳಿಂದ ಸೋಮವಾರಪೇಟೆ ಪಟ್ಟಣದ ಬಹುತೇಕ ಎಲ್ಲಾ ಎಟಿಎಂಗಳು ಬಂದ್ ಆಗಿದ್ದು, ಹಣಕ್ಕಾಗಿ ಗ್ರಾಹಕರು ಪರದಾಡುತ್ತಿದ್ದಾರೆ.

ಸೋಮವಾರಪೇಟೆಯಲ್ಲಿ ಎಸ್‍ಬಿಐ, ವಿಜಯಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‍ಗಳ ಎಟಿಎಂಗಳಿದ್ದು, ಯಾವದರಲ್ಲೂ ಹಣ ಇಲ್ಲ ಎಂಬ ಸೂಚನಾ ಫಲಕಗಳನ್ನು ತೂಗು ಹಾಕಲಾಗಿದೆ. ಈ ಬಗ್ಗೆ ಬ್ಯಾಂಕ್‍ಗಳ ವ್ಯವಸ್ಥಾಪಕರನ್ನು ವಿಚಾರಿಸಿದರೆ, ಎಸ್‍ಬಿಐನಿಂದ ಹಣವೇ ಬರುತ್ತಿಲ್ಲ ಎಂಬ ಉತ್ತರ ದೊರಕುತ್ತಿದೆ. ಬ್ಯಾಂಕ್‍ಗಳಲ್ಲೂ ಸಹ ಹಣ ಜಮಾವಣೆ ಮಾಡುವವರ ಸಂಖ್ಯೆ ಇಳಿಕೆಯಾಗಿದ್ದು, ಹಣ ಡ್ರಾ ಮಾಡುವವರ ಸಂಖ್ಯೆ ಅಧಿಕವಾಗಿದೆ. ಗ್ರಾಹಕರ ಬೇಡಿಕೆಗನುಗುಣವಾಗಿ ಹಣ ನೀಡಲು ಬ್ಯಾಂಕ್‍ಗಳಿಗೂ ಸಾಧ್ಯವಾಗುತ್ತಿಲ್ಲ.

ಇತರ ಬ್ಯಾಂಕ್‍ಗಳಿಗೆ ಹಣ ನೀಡುವ ಜವಾಬ್ದಾರಿ ಹೊತ್ತಿರುವ ಎಸ್‍ಬಿಐ ಶಾಖೆಗೆ ಕರೆ ಮಾಡಿದರೆ ದೂರವಾಣಿ ಸ್ವೀಕರಿಸುತ್ತಿಲ್ಲ. ಬ್ಯಾಂಕ್‍ಗೆ ಹೋಗಿ ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈ ಮಧ್ಯೆ ಇತರ ಬ್ಯಾಂಕ್‍ಗಳು ಹಾಸನ, ಕುಶಾಲನಗರ, ಮಡಿಕೇರಿ ಶಾಖೆಗಳಿಂದ ಹಣ ತಂದು ಗ್ರಾಹಕರಿಗೆ ವಿತರಿಸುವ ಕಾರ್ಯ ಮಾಡುತ್ತಿವೆ. ಆದರೂ ಗ್ರಾಹಕರ ಬೇಡಿಕೆಯ ಹಣವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕ್ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ.

ಎಸ್‍ಬಿಐನಿಂದ ಹಣವನ್ನೇ ನೀಡುತ್ತಿಲ್ಲ. ಕೇಳಿದರೆ ನಮಗೇ ಹಣ ಬಂದಿಲ್ಲ ಎಂಬಿತ್ಯಾದಿ ಸಬೂಬು ಹೇಳುತ್ತಿದ್ದಾರೆ. ಈ ಹಿಂದೆ ಇದ್ದ ವ್ಯವಸ್ಥಾಪಕರು ಎಂತಹ ಸಂದರ್ಭದಲ್ಲೂ ಹಣಕಾಸಿಗೆ ಕೊರತೆ ಮಾಡುತ್ತಿರಲಿಲ್ಲ ಎಂದು ಮತ್ತೋರ್ವ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಎಸ್‍ಬಿಐ ಶಾಖೆಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕಾರವಾಗಲಿಲ್ಲ.

ಎಟಿಎಂಗಳ ಬಂದ್‍ನಿಂದಾಗಿ ಸೋಮವಾರಪೇಟೆ ವ್ಯಾಪ್ತಿಯ ಗ್ರಾಹಕರು ಹಣಕಾಸಿನ ತೊಂದರೆಗೆ ಸಿಲುಕಿದ್ದಾರೆ. ಬ್ಯಾಂಕ್‍ನಲ್ಲಿರುವ ತಮ್ಮದೇ ಹಣವನ್ನು ಪಡೆಯಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 20 ದಿನಗಳಿಂದಲೂ ಇದೇ ಅವ್ಯವಸ್ಥೆಯಿದ್ದರೂ ಸಂಬಂಧಿಸಿದವರು ಗಂಭೀರವಾಗಿ ಪರಿಗಣಿಸಿಲ್ಲ. ಕುಶಾಲನಗರ, ಮಡಿಕೇರಿಗಳಲ್ಲಿ ಇಲ್ಲದ ಸಮಸ್ಯೆ ಸೋಮವಾರಪೇಟೆಯಲ್ಲಿ ಉದ್ಬವಿಸಿದ್ದಾದರೂ ಹೇಗೆ? ಮತ್ತು ಯಾಕೆ? ಎಂಬದು ಯಕ್ಷ ಪ್ರಶ್ನೆ!