ಕೂಡಿಗೆ, ಮಾ. 5 : ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮೀಣ ಜನರಲ್ಲಿ ನೀರು ಮತ್ತು ನೈರ್ಮಲ್ಯ ಆರೋಗ್ಯ ಕುರಿತಂತೆ ಅರಿವು ಮೂಡಿಸುವ ವಿಶೇಷ ಗ್ರಾಮಸಭೆ ಗ್ರಾ.ಪಂ ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಅವಶ್ಯಕತೆ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಯಿತು.
ಗ್ರಾಮ ಪಂಚಾಯ್ತಿಯ ಸ್ವ-ಸಹಾಯ ಸಂಘಗಳು ಮತ್ತು ಸರಕಾರೇತರ ಸಂಸ್ಥೆಗಳು, ಆಶಾ ಕಾರ್ಯಕರ್ತೆಯರ ಜವಬ್ದಾರಿಗಳ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾಹಿತಿ ನೀಡಿದರು. ಬಸವ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 55 ಕುಟುಂಬಗಳಿಗೆ ವಸತಿ ನಿರ್ಮಿಸಿಕೊಳ್ಳಲು ಕಾರ್ಯಾದೇಶವನ್ನು ನೀಡಲಾಯಿತು. ಈ ವರ್ಷದಲ್ಲಿ ಪ್ರತಿ ಫಲಾನುಭವಿಗೆ 1,40,000 ರೂ ಅಂದಾಜಿನಲ್ಲಿ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರವನ್ನು ಸಭೆಯಲ್ಲಿ ನೀಡಲಾಯಿತು. ಈ ಸಂದರ್ಭ ಗ್ರಾಮಸ್ಥರು ತಮ್ಮ ವಾರ್ಡ್ಗಳಲ್ಲಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಮನವಿ ಸಲ್ಲಿಸಿದರು. ಸಭೆಯಲ್ಲಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.