ವೀರಾಜಪೇಟೆ ಮಾ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಬೇಕಿದ್ದ ಮಾಸಿಕ ಸಭೆಯು ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿತು.

ಸಭೆ 11 ಗಂಟೆಗೆ ಆರಂಭವಾಗ ಬೇಕಿತ್ತು. 11.20 ಆದರೂ ಬಿಜೆಪಿಯ 9, ಕಾಂಗ್ರೆಸ್‍ನ 1, ಜೆಡಿಎಸ್ ಓರ್ವ ಸದಸ್ಯ ಗೈರು ಹಾಜರಾದ ಕಾರಣ ಅಧ್ಯಕ್ಷ ಇ.ಸಿ ಜೀವನ್ ಸಭೆಯನ್ನು ಮುಂದೂಡಿ ಹೊರ ನಡೆದರು.

ಕಾಂಗ್ರೆಸ್‍ನ ಶೀಭಾ ಪೃಥ್ವಿನಾಥ್, ನಾಮಕರಣ ಸದಸ್ಯರಾದ ಡಿ.ಪಿ ರಾಜೇಶ್, ಪಟ್ಟಡ ರಂಜಿ ಪೂಣಚ್ಚ, ಮಹಮದ್ ರಾಫಿ ಬಿಜೆಪಿ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಸಭೆ ನಡೆಸಲು ಸಾಧ್ಯವಾಗದ ಅಧ್ಯಕ್ಷ ಇ.ಸಿ ಜೀವನ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಸಭೆಯಲ್ಲಿ ಜೆಡಿಎಸ್‍ನ ಮೈನುದ್ದೀನ್, ಕೆ.ಎನ್. ವಿಶ್ವನಾಥ್, ನಾಗಮ್ಮ, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು.

15 ದಿನಗಳ ಹಿಂದೆಯೇ ತಾ.3ರ ಸಭೆ ನಿಗದಿಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಬಿಜೆಪಿ ಪಕ್ಷದ ವತಿಯಿಂದ ಕುಶಾಲನಗರದಲ್ಲಿ ಜನ ಸುರಕ್ಷಾ ಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡ ಕಾರಣ ಬಿಜೆಪಿ ಸದಸ್ಯರು ಇಂದು ಸಭೆಗೆ ಗೈರು ಹಾಜರಾಗಿ ಯಾತ್ರೆಗೆ ತೆರಳಿದ್ದಾರೆ. ಸಭೆ ಇರುವ ವಿಚಾರವನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ಮುಂದಿನ ಮೂರು ದಿನದಲ್ಲಿ ಸಭೆ ನಡೆಸಲಾಗುವದು ಎಂದು ಅಧ್ಯಕ್ಷ ಇ.ಸಿ. ಜೀವನ್ ಪ್ರತಿಕ್ರಿಯಿಸಿದ್ದಾರೆ.