ಕುಶಾಲನಗರ, ಮಾ. 3: ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ರಸ್ತೆ ಒತ್ತುವರಿ ಮಾಡಿ ಆವರಣ ಗೋಡೆ ನಿರ್ಮಿಸಿದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿಗಳು ತೆರವುಗೊಳಿಸುವ ಸಂದರ್ಭ ಕಟ್ಟಡ ಮಾಲೀಕ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೇಲೆ ಕಲ್ಲು ಎತ್ತಿ ಹಾಕಿದ ಘಟನೆಯೊಂದು ನಡೆದಿದೆ.

ಶನಿವಾರ ಬೆಳಗಿನ ವೇಳೆ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಮತ್ತು ಪಂಚಾಯ್ತಿ ಪೌರಕಾರ್ಮಿಕರು ಮಡಿಕೇರಿ ರಸ್ತೆಯ ಲಾಡ್ಜ್ ಕಟ್ಟಡದ ಆವರಣ ಗೋಡೆಯನ್ನು ತೆರವು ಗೊಳಿಸುವ ಸಂದರ್ಭ ಈ ಘಟನೆ ನಡೆದಿದೆ. ಲಾಡ್ಜ್‍ನ ಮಾಲೀಕ ಮಹಮ್ಮದ್ ಎಂಬಾತ ಕಾರ್ಯಾಚರಣೆ ಸಂದರ್ಭ ಆಕ್ರೋಶ ಗೊಂಡು ಲಾಡ್ಜ್‍ನ 1ನೇ ಮಹಡಿ ಯಿಂದ ದೊಡ್ಡ ಕಲ್ಲೊಂದನ್ನು ಎತ್ತಿ ಹಾಕಿದ್ದಾನೆ. ಅದೃಷ್ಟವಶಾತ್ ಶ್ರೀಧರ್, ದಫೇದಾರ್ ಕುಮಾರ್ ಮತ್ತು ಪೌರಕಾರ್ಮಿಕರು ಹಾಗೂ ಮಾಜಿ ಸದಸ್ಯರಾದ ಅಬ್ದುಲ್ ಖಾದರ್ ಮತ್ತಿತರರು ಅಪಾಯದಿಂದ ತಪ್ಪಿಸಿಕೊಂಡಿದ್ದು ಅನಾಹುತವೊಂದು ತಪ್ಪಿದೆ.

ಈ ಸಂದರ್ಭ ಮಾಲೀಕನ ಪುತ್ರ ಸ್ಥಳಕ್ಕೆ ಬಂದು ಅಧಿಕಾರಿಗಳಲ್ಲಿ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಪ್ರಕರಣ ಸ್ಥಳದಲ್ಲೇ ಇತ್ಯರ್ಥಗೊಂಡಿದೆ. ಪ್ರಸಕ್ತ ಲಾಡ್ಜ್ ಅಕ್ರಮವಾಗಿ ನಿರ್ಮಾಣ ಗೊಂಡಿದ್ದು, ರಸ್ತೆಯನ್ನು ಒತ್ತುವರಿ ಮಾಡಿದ ಕಾರಣ ಚರಂಡಿ ಕೆಲಸಕ್ಕೆ ಅಡ್ಡಿಯುಂಟಾಗಿದೆ. ಈ ಬಗ್ಗೆ ಮಾಲೀಕನಿಗೆ ಹಲವು ಬಾರಿ ನೋಟಿಸ್ ನೀಡಿದರೂ ಯಾವದೇ ಪ್ರಯೋಜನವಾಗಿಲ್ಲ. ಪಂಚಾಯ್ತಿ ಪೌರಕಾರ್ಮಿಕರೊಂದಿಗೆ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಯಾವದೇ ಅನಾಹುತ ಉಂಟಾಗದ ಹಿನ್ನೆಲೆಯಲ್ಲಿ ಲಾಡ್ಜ್ ಮಾಲೀಕನ ವಿರುದ್ಧ ಪೊಲೀಸ್ ದೂರು ನೀಡಿಲ್ಲ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

- ಸಿಂಚು