ಕುಶಾಲನಗರ, ಮಾ. 2: 5 ದಿನಗಳ ಕಾಲ ಕಂಡುಬಂದ ಜಿಲ್ಲೆಯ ದುಬಾರೆ ಮೀಸಲು ಅರಣ್ಯದ ಕಾಡ್ಗಿಚ್ಚು ಹತೋಟಿಗೆ ಬರುತ್ತಿದ್ದ ಬೆನ್ನಲ್ಲೇ ಆನೆಕಾಡು ಮೀಸಲು ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚುವದ ರೊಂದಿಗೆ ನೂರಾರು ಎಕರೆ ವ್ಯಾಪ್ತಿಯ ಕಾಡು ಭಸ್ಮಗೊಂಡ ಘಟನೆ ನಡೆದಿದೆ.

ಕುಶಾಲನಗರ ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ಆನೆಕಾಡು ಮೀಸಲು ಅರಣ್ಯದ ಮಾವಿನಹಳ್ಳ ಎಂಬಲ್ಲಿಂದ ಬೆಂಕಿ ಕಾಣಿಸಿಕೊಂಡಿದ್ದು ಸಂಜೆ ತನಕ ನಿರಂತರ ಕಾಡು ಉರಿಯುವದ ರೊಂದಿಗೆ ಬೆಂಕಿ ಆರಿಸುವ ಕಾರ್ಯಾಚರಣೆ ಹತೋಟಿಗೆ ಬಂದಿಲ್ಲ. ಮಧ್ಯಾಹ್ನ 12 ಗಂಟೆಗೆ ಕಂಡುಬಂದ ಬೆಂಕಿಯನ್ನು ಆರಿಸಲು ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ಅಧಿಕಾರಿಗಳ ನೇತೃತ್ವದಲ್ಲಿ 100ಕ್ಕೂ ಅಧಿಕ ಸಿಬ್ಬಂದಿ ಹಾಗೂ ಅರಣ್ಯ ರಕ್ಷಕ ತರಬೇತಿ ಕೇಂದ್ರದ ತರಬೇತುದಾರರು, ಸ್ಥಳೀಯರು ಸೇರಿದಂತೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು. ಹೀಗಿದ್ದೂ ಅಗ್ನಿ ಜ್ವಾಲೆ ರಾತ್ರಿ ತನಕವೂ ಹತೋಟಿಗೆ ಬಂದಿಲ್ಲ.

ಕುಶಾಲನಗರ, ಸೋಮವಾರಪೇಟೆ, ಮಡಿಕೇರಿ ಕಡೆಯಿಂದ ಹಲವು ಅಗ್ನಿಶಾಮಕ ವಾಹನಗಳು ಆಗಮಿಸಿ ಅರಣ್ಯದೊಳಗೆ ಸಂಚರಿಸಿ ಬೆಂಕಿ ಹತೋಟಿಗೆ ತರಲು ನಿರಂತರವಾಗಿ ಶ್ರಮಿಸುತ್ತಿದ್ದ ದೃಶ್ಯ ಕಂಡುಬಂತು. ಕಾಡಿನ ಅಂದಾಜು 2 ಕಿ.ಮೀ ವ್ಯಾಪ್ತಿಯಲ್ಲಿ ರಭಸದ ಗಾಳಿಗೆ ಬೆಂಕಿ ಹಬ್ಬುವದರೊಂದಿಗೆ ಸಂಜೆ ವೇಳೆಯಲ್ಲಿ ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೆಂಕಿ ಆವರಿಸತೊಡಗಿ ಆತಂಕ ಮೂಡಿಸಿತು. ಸಮೀಪದ ಅತ್ತೂರು ಮೀಸಲು ಅರಣ್ಯಕ್ಕೆ ಬೆಂಕಿ ಆವರಿಸದಂತೆ ಎಚ್ಚರವಹಿಸುವದ ರೊಂದಿಗೆ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ನೇತೃತ್ವದಲ್ಲಿ ಸಿಬ್ಬಂದಿಗಳು ಧಾವಿಸಿ ವಾಹನ ಸಂಚಾರ ನಿಯಂತ್ರಣದಲ್ಲಿ ತೊಡಗಿದರೆ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಜಿಲ್ಲಾ ಅಧಿಕಾರಿ ಚಂದನ್ ನೇತೃತ್ವದಲ್ಲಿ ಸಿಬ್ಬಂದಿಗಳು 5ಕ್ಕೂ ಅಧಿಕ ವಾಹನಗಳು ಬೆಂಕಿಯ ಕೆನ್ನಾಲಿಗೆ ಬೇರೆಡೆ ಹಬ್ಬದಂತೆ

(ಮೊದಲ ಪುಟದಿಂದ) ನೀರು ಹಾಯಿಸುವದರಲ್ಲಿ ತೊಡಗಿದ್ದರು. ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಮಂಜುನಾಥ್, ಸಹಾಯಕ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಸ್ಥಳೀಯ ವಲಯ ಅರಣ್ಯ ಅಧಿಕಾರಿ ಅರುಣ್ ಮತ್ತು ಸಿಬ್ಬಂದಿ ಬೆಂಕಿ ಹೆಚ್ಚಿನ ವ್ಯಾಪ್ತಿಗೆ ಹಬ್ಬದಂತೆ ಜೆಸಿಬಿ ಬಳಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಕಾಡಿನ ಇತರ ಭಾಗಗಳಿಗೆ ಬೆಂಕಿ ವ್ಯಾಪಿಸದಂತೆ ಫೈರ್‍ಲೈನ್ ನಿರ್ಮಾಣ ಮಾಡುವಲ್ಲಿ ಸಿಬ್ಬಂದಿಗಳು ನಿರತರಾಗಿದ್ದರು.

ಮನಕಲಕುವ ದೃಶ್ಯ : ಈ ನಡುವೆ ಜೆಸಿಬಿ ಯಂತ್ರವೊಂದು ಕಾಡಿನೊಳಗೆ ಸಿಲುಕಿ ಸ್ವಲ್ಪಕಾಲ ಕಾರ್ಯಚರಣೆಗೂ ಅಡ್ಡಿಯುಂಟಾಯಿತು. ಮಡಿಕೇರಿ ಕುಶಾಲನಗರ ನಡುವೆ ವಾಹನ ಸಂಚಾರಕ್ಕೆ ಸ್ವಲ್ಪಕಾಲ ಆತಂಕದ ವಾತಾವರಣ ಸೃಷ್ಠಿಯಾಗುವದರೊಂದಿಗೆ ಸಂಚಾರ ಸ್ಥಗಿತಗೊಳಿಸಬೇಕಾಯಿತು.

ಬೆಂಕಿಯ ಕೆನ್ನಾಲಿಗೆಯ ನಡುವೆ ಸಿಲುಕಿಕೊಂಡ ಜಿಂಕೆ, ಮೊಲ ಮತ್ತಿತರ ಪ್ರಾಣಿ ಪಕ್ಷಿಗಳು ಅತ್ತಿಂದಿತ್ತ ಪ್ರಾಣ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚೆಲ್ಲಾಪಿಲ್ಲಿಯಾಗಿ ಓಡಾಡುತ್ತಿದ್ದ ದೃಶ್ಯ ನೋಡುಗರ ಮನಕಲಕುವಂತಿತ್ತು.

ಕಳೆದ ವರ್ಷ ಮಾರ್ಚ್ 3 ರಂದು ಅತ್ತೂರು ಮೀಸಲು ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ಎಕರೆಯಷ್ಟು ಕಾಡು ನಾಶವಾಗಿದ್ದು ಇದೀಗ ಕಳೆದ ಬಾರಿ ಉಳಿಸಿಕೊಂಡಿದ್ದ ಹೆದ್ದಾರಿಯ ಇನ್ನೊಂದು ಭಾಗದ ಆನೆಕಾಡು ಮೀಸಲು ಅರಣ್ಯಕ್ಕೆ ಬೆಂಕಿ ತಗುಲಿ ಅರಣ್ಯ ಭಸ್ಮವಾಗಿದೆ. ಹಲವು ಮರಗಳ ಪೊಟರೆಗೆ ಬೆಂಕಿ ತಗಲುವದರೊಂದಿಗೆ ಎತ್ತರದಲ್ಲಿ ಬೆಂಕಿ ಕಂಡುಬಂದು ಇಡೀ ವಾತಾವರಣ ಹೊಗೆಮಯವಾಗಿದ್ದ ದೃಶ್ಯ ಆತಂಕ ಸೃಷ್ಠಿಮಾಡಿತ್ತು.

ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿರುವ ಸಾಧ್ಯತೆ ಇರುವದಾಗಿ ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಮಂಜುನಾಥ್ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಇಲಾಖೆ ಮೂಲಕ ಎಚ್ಚರವಹಿಸಲು ಕಾರ್ಯಯೋಜನೆ ರೂಪಿಸಲಾಗುವದು ಎಂದು ಅವರು ತಿಳಿಸಿದ್ದಾರೆ.

ಇಂದು ಸಂಜೆಗತ್ತಲೆ ನಡುವೆಯೂ ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಸಾರ್ವಜನಿಕರ ಸಹಿತ ಸಿಬ್ಬಂದಿಗಳು ನಾಲ್ಕು ನಿಟ್ಟಿನಲ್ಲಿ ಬೆಂಕಿ ಹರಡದಂತೆ ತಡೆಯುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದರು. ಒಂದೆಡೆ ರಸ್ತೆ ದಾಟಿ ಮತ್ತೊಂದೆಡೆಗೆ ಅಗ್ನಿಯ ಕೆನ್ನಾಲಿಗೆ ಚಾಚದಂತೆ ಪ್ರಯತ್ನ ನಡೆದಿದ್ದರೂ, ಕಾಡಿನೊಳಗೆ ಈಗಾಗಲೇ ಹೊತ್ತಿ ಉರಿದಿರುವ ಪ್ರದೇಶ ಪ್ರವೇಶಿಸಲು ಕಷ್ಟವಾಗಿದೆ. ಆ ದಿಕ್ಕಿನಲ್ಲಿ ರಾತ್ರಿ ಹೊತ್ತಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದ್ದರೂ, ತಾ. 3ರಂದು (ಇಂದು) ಹಗಲು ಮತ್ತೆ ಪರಿಸ್ಥಿತಿ ಏನೆಂದು ಗೋಚರಿಸಲಿದೆ.

ಒಟ್ಟಿನಲ್ಲಿ ಅರಣ್ಯ ಇಲಾಖೆ, ಅಗ್ನಿ ಶಾಮಕ ದಳದಿಂದ ಸಾಕಷ್ಟು ಮುಂಜಾಗ್ರತಾ ಕ್ರಮ ಅನುಸರಿಸುತ್ತಿರುವದು ಕಂಡು ಬಂದಿದೆ.

- ವರದಿ : ಚಂದ್ರಮೋಹನ್, ಗಣೇಶ್ ಕುಡೆಕಲ್,

ಹರೀಶ್ ಮಾದಪ್ಪ