ಮಡಿಕೇರಿ, ಮಾ. 2: ಕರಿಮೆಣಸನ್ನು ಗಂಭೀರ ಹಾಗೂ ಪ್ರಬಲ ಕೃಷಿ ಎಂದು ಪರಿಗಣಿಸಿ ಬೆಳೆಯುವದಾದರೆ ಉತ್ಪಾದನಾ ವೆಚ್ಚ ಕೆ.ಜಿ. ಒಂದಕ್ಕೆ ರೂ. 449.51 ತಗಲುತ್ತದೆ. ಆದರೆ ಇಂದಿನ ದರ 350 ರಿಂದ 355!

ಕರಿಮೆಣಸು ಆಮದು ಇಂದಿಗೂ ಮುಂದುವರಿದಿದ್ದು, ಇದರಿಂದಾಗಿ ಬೆಲೆ ಕುಸಿತಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಿರುವ ಕರ್ನಾಟಕ ಬೆಳೆಗಾರರ ಒಕ್ಕೂಟ, ಈ ಬಗ್ಗೆ ಸಂಸತ್ ಸದಸ್ಯರುಗಳು ಗಂಭೀರ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕೇಂದ್ರ ವಾಣಿಜ್ಯ ಸಚಿವರ ಆದೇಶದಂತೆ ಕೆ.ಜಿ. ಒಂದಕ್ಕೆ 500 ಆಮದು ಶುಲ್ಕ ವಿಧಿಸಿದ್ದರೂ ಬೇರೆ ಮಾರ್ಗದ ಮೂಲಕ ಸುಂಕ ಪಾವತಿಸದೆ ಕರಿಮೆಣಸನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ರಾಷ್ಟ್ರಕ್ಕೆ 1,500 ಕೋಟಿ ನಷ್ಟವಾಗಿದ್ದು, ಬೆಳೆಗಾರರು 3 ಸಾವಿರ ಕೋಟಿ ನಷ್ಟ ಹೊಂದಿದ್ದಾರೆಂದು ಒಕ್ಕೂಟ ಅಂದಾಜಿಸಿದೆ.

ಹೀಗಾಗಿ ಮಲೆನಾಡು ಭಾಗದ ಸಂಸದರುಗಳು ಸಂಸತ್ತಿನ ಅಧಿವೇಶನದಲ್ಲಿ ಚರ್ಚೆಗೆ ತಂದು ಕೇಂದ್ರ ಸರಕಾರದ ಗಮನ ಸೆಳೆಯುವಂತೆ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಜೈರಾಂ, ಪ್ರಧಾನ ಕಾರ್ಯದರ್ಶಿ ಯು.ಎಂ. ತೀರ್ಥ ಮಲ್ಲೇಶ್ ಒತ್ತಾಯಿಸಿದ್ದಾರೆ.