ಗೋಣಿಕೊಪ್ಪಲು, ಮಾ. 3: ಕಳೆದ ಎರಡು ಮೂರು ವರ್ಷಗಳಲ್ಲಿ ಮಳೆಯ ಪ್ರಮಾಣದ ಏರು ಪೇರು, ಜಾಗತಿಕ ತಾಪಮಾನ ಹೆಚ್ಚಳ, ವಾಣಿಜ್ಯ ನಗರಿ ಖ್ಯಾತಿಯ ಗೋಣಿಕೊಪ್ಪಲಿನ ಆಸು ಪಾಸಿನಲ್ಲಿದ್ದ ಭತ್ತದ ಗದ್ದೆಗಳು ನಿವೇಶನಗಳಾಗಿ ಪರಿವರ್ತನೆ, ಇಲ್ಲಿನ ಕೀರೆಹೊಳೆ, ಕೈಕೇರಿ ತೋಡಿಗೆ ಸುರಿಯುವ ಕಸದ ರಾಶಿ, ಲಕ್ಷಣ ತೀರ್ಥ, ಕಾವೇರಿ ನದಿಯನ್ನು ಸೇರುವ ಕೈತೋಡುಗಳಿಗೆ ಶೌಚಾಲಯ, ಕಸಾಯಿ ಖಾನೆಯ ಅಶುದ್ಧ ನೀರು ಬಿಡುಗಡೆ, ಲಂಗು ಲಗಾಮಿಲ್ಲದೆ ಯದ್ವಾ ತದ್ವಾ ಬೆಳೆಯುತ್ತಿರುವ ನಗರ, ತೋಡುಗಳಿಗೆ ಮೀಸಲಿಟ್ಟ ಪೈಸಾರಿ ಜಾಗದ ಮೇಲಿನ ನಿರಂತರ ಆಕ್ರಮಣ ಇತ್ಯಾದಿ ಇಲ್ಲಿ ಸಾಮಾನ್ಯವಾಗಿದೆ. ಮಾನವನ ದುರಾಸೆಗೆ ಗೋಣಿಕೊಪ್ಪಲು ನಿತ್ಯ ನಲುಗುತ್ತಿದೆ. ಇಲ್ಲಿನ ಪ್ರಜ್ಞಾವಂತ ನಾಗರಿಕ ರೆನ್ನುವವರು ಸಾಮಾಜಿಕ ಕಳಕಳಿ ಇಲ್ಲದ ಸ್ಥಿತಿಯಲ್ಲಿರುವದೇ ಗೋಣಿಕೊಪ್ಪಲು ನಗರ ಇಂದು ಹಲವು ಸಮಸ್ಯೆಗಳಿಂದ ಬಳಲಲು ಮುಖ್ಯ ಕಾರಣ. ಇದೀಗ ಫೆಬ್ರವರಿ ತಿಂಗಳಿನಲ್ಲಿಯೇ ಗೋಣಿಕೊಪ್ಪಲಿನಲ್ಲಿ ಭೀಕರ ಕುಡಿಯುವ ನೀರಿನ ಕ್ಷಾಮ ತಲೆದೋರಿರುವದು ಆತಂಕಕಾರಿಯಾಗಿದೆ.

ಗೋಣಿಕೊಪ್ಪಲಿನ ಸಾರ್ವಜನಿಕ ನೀರು ಪೂರೈಕೆ ಯಾವದೇ ನದಿಮೂಲವನ್ನು ಅವಲಂಬಿಸಿಲ್ಲ ದಿರುವದೇ ಇಂದಿನ ದುಸ್ಥಿತಿಗೆ ಕಾರಣ. ವೀರಾಜಪೇಟೆ ನಗರಕ್ಕಾದರೆ ಬೇತ್ರಿ ಕಾವೇರಿ ನದಿ ಮೂಲದ ಆಶ್ರಯವಿದೆ. ಗೋಣಿಕೊಪ್ಪಲಿಗೆ 15 ಕೊಳವೆ ಬಾವಿಗಳೇ ಜೀವಾಳ.

ಗೋಣಿಕೊಪ್ಪಲು ಜನತೆ ಇನ್ನು ಮಾರ್ಚ್, ಏಪ್ರಿಲ್, ಮೇ ತಿಂಗಳ ಬಿಸಿಲ ಧಗೆಯನ್ನು ಎದುರಿಸ ಬೇಕಾಗಿದೆ. ಇಲ್ಲಿನ ಸಾರ್ವಜನಿಕ ನಲ್ಲಿಗಳಿಗೆ ಹಲವು ಉದ್ಯಮಿಗಳು, ವ್ಯಾಪಾರಸ್ಥರು ಕಾನೂನು ಬಾಹಿರವಾಗಿ ‘ಮೋಟಾರ್’ ಅಳವಡಿಸಿಕೊಂಡಿರುವ ಹಿನ್ನೆಲೆ ಹಲವು ನೀರಿನ ಗ್ರಾಹಕರ ನಲ್ಲಿಯಲ್ಲಿ ಕೂದಲೆಳೆಯಂತೆ ನೀರು ಬರುತ್ತಿದೆ. ಕಳೆದ ಹಲವು ವರ್ಷಗಳಿಂದ ನೀರಿನ ಕ್ಷಾಮದಿಂದಾಗಿ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇದೀಗ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಬೇಕಾದ ನೀರು ಸರಬರಾಜು ಮಧ್ಯಾಹ್ನದ ನಂತರ, ಸಂಜೆ ಅಥವಾ ನಿರ್ದಿಷ್ಟ ಸಮಯವಲ್ಲದ ಸಮಯದಲ್ಲಿ ಬರುತ್ತಿದ್ದು ಇಲ್ಲಿನ ನಿವಾಸಿಗಳು ದಿನನಿತ್ಯ ಪರದಾಡುವಂತಾಗಿದೆ. ಹಲವು ವರ್ಷಗಳಿಂದ ಕೊಡಗಿನಲ್ಲಿ ಮಳೆಯ ಅಭಾವದ ಹಿನ್ನೆಲೆ ರಾಜ್ಯ ಸರ್ಕಾರವು ಕೊಳವೆ ಬಾವಿ ತೋಡಿಸಲು ವಿನಾಯಿತಿಯನ್ನು ನೀಡಿತ್ತು. ರೈತರು ತಮ್ಮ ಫಸಲು ರಕ್ಷಣೆಗೆ ಕೊಳವೆ ಬಾವಿ ತೋಡಿಸಲು ಅವಕಾಶ ಕಲ್ಪಿಸಿತ್ತು. ಆದರೆ, ವಿಪರ್ಯಾಸ ನೋಡಿ. ಗೋಣಿಕೊಪ್ಪಲಿಗೆ ಕೊಳವೆ ಬಾವಿ ಸಡಿಲಿಕೆ ನಿಯಮ ದೊಡ್ಡ ಅವಾಂತರಕ್ಕೆ ಕಾರಣವಾಗಿದೆ. ಇಲ್ಲಿನ ಹೊಟೇಲ್ ಉದ್ಯಮಿಗಳು, ಬಾರ್ ಮಾಲೀಕರು ಹಾಗೂ ಕೆಲವು ಶ್ರೀಮಂತ ನಿವಾಸಿಗಳು ಇದರ ಲಾಭವನ್ನು ಪಡೆದು ಕೊಳವೆ ಬಾವಿಯನ್ನು ರಾಜಾರೋಷವಾಗಿ ತೋಡಿಸಿಕೊಂಡಿದ್ದಾರೆ. ಬೋರ್‍ವೆಲ್ ನೀರನ್ನೇ ಕಳೆದ 30 ವರ್ಷಗಳಿಂದಲೂ ಕುಡಿಯುತ್ತಾ ಬಂದಿರುವ ಇಲ್ಲಿಯ ಜನತೆ ಇದೀಗ ಸಾರ್ವಜನಿಕ ಹಾಗೂ ಗ್ರಾ.ಪಂ.ಯ ‘ನಲ್ಲಿ’ ನೀರಿನ ವ್ಯತ್ಯಯದಿಂದಾಗಿ ಹಿಡಿಶಾಪ ಹಾಕುತ್ತಿದ್ದಾರೆ. ಅಟೋಗಳಲ್ಲಿ, ವಾಹನ ಗಳಲ್ಲಿ ಬಿಂದಿಗೆ ತುಂಬಿಸಿಕೊಂಡು ಅಲ್ಲಿ ಇಲ್ಲಿ ನೀರು ಸಂಗ್ರಹಿಸಿ ಮನೆಗೆ ತರುತ್ತಿದ್ದಾರೆ. ಕೆಲವು ನಲ್ಲಿಗಳಲ್ಲಿ ವಾರಗಟ್ಟಲೆ ನೀರು ಹರಿಯುತ್ತಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.

ಇಲ್ಲಿನ ಹಲವು ಹೋಟೆಲ್‍ಗಳಲ್ಲಿ ನಾಮಕರಣ, ನಿಶ್ಚಿತಾರ್ಥ, ಮದುವೆ ಇತ್ಯಾದಿಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜಾಗುತ್ತಿದೆ. ಕೆಲವು ಹೋಟೆಲ್ ಮಾಲೀಕರು ಎರಡೆರಡು ಕೊಳವೆ ಬಾವಿಗಳನ್ನು ತೋಡಿಸಿದರೂ ಸಮರ್ಪಕ ನೀರು ಸಿಗುತ್ತಿಲ್ಲವೆನ್ನುವ ಕೂಗು ಕೇಳಿಬಂದಿದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಇಲ್ಲಿನ ನೀರು ಹರಿಯುವ ಕೀರೆಹೊಳೆ ದಡ ಹಾಗೂ 7 ಹಾಗೂ 8ನೇ ವಾರ್ಡ್‍ನ ತೋಡಿನ ಸಮೀಪವೇ ಕೊಳವೆ ಬಾವಿ ತೋಡಿದ್ದು ಗ್ರಾ.ಪಂ. ಆಡಳಿತ ಕಣ್ಣಿದ್ದು ಕುರುಡರಂತೆ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅತಿಕ್ರಮಣ- ಜಿಲ್ಲಾಧಿಕಾರಿಗೆ ದೂರು

ಗೋಣಿಕೊಪ್ಪಲಿನ ಪೈಸಾರಿ ಜಾಗ ಅತಿಕ್ರಮಣ ಹಾಗೂ ತೋಡು ಅತಿಕ್ರಮಣದ ಬಗ್ಗೆ ಈ ಹಿಂದೆ ಜಿಲ್ಲಾಧಿಕಾರಿ ಎಂ.ವಿ.ಜಯಂತಿ ಅವರಿದ್ದಾಗಲೇ ಸಾರ್ವಜನಿಕರು ದೂರು ನೀಡಿದ್ದರು. ನಂತರ ಉಪ ವಿಭಾಗಾಧಿಕಾರಿ ರವಿ ಅವಧಿಯಲ್ಲಿ ಕೀರೆಹೊಳೆ ಹಾಗೂ ಕೈಕೇರಿ ತೋಡಿಗೆ ಮೀಸಲಾದ ಪೈಸಾರಿ ಜಾಗದ ಸರ್ವೆ ಕಾರ್ಯ ನಡೆದಿತ್ತು. ಸುಮಾರು 48 ಮಂದಿ ಈ ಹಿಂದೆ ತೋಡನ್ನು, ಹೊಳೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖವಿದ್ದರೂ, ತೆರವು ಕಾರ್ಯ ಇನ್ನೂ ನಡೆದಿಲ್ಲ. ಇದೀಗ ನೂತನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಗೋಣಿಕೊಪ್ಪಲು ಜಲಮೂಲ ಹಾಗೂ ಪೈಸಾರಿ ಜಾಗದ ಒತ್ತುವರಿ ಕುರಿತು ಇಲ್ಲಿನ ಕೆಲವು ಸಾರ್ವಜನಿಕರು ದೂರಿತ್ತ ಹಿನ್ನೆಲೆ ಮರು ಸರ್ವೆ ಮಾಡಿಸಿ ಒತ್ತುವರಿ ತೆರವು ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಅವರಿಗೆ ನಿರ್ದೇಶನ ನೀಡಿದ್ದಾರೆ.

ಗೋಣಿಕೊಪ್ಪಲು ಮತ್ತು ಅರುವತ್ತೊಕ್ಕಲು ಗ್ರಾ.ಪಂ.ಯ ಸಮರ್ಪಕ ಗಡಿಗುರುತು ನಡೆಯದಿರುವ ಹಿನ್ನೆಲೆ ವ್ಯಾಪಾರ ಲೈಸೆನ್ಸ್, ಕಂದಾಯ, ಎನ್.ಓ.ಸಿ, ಇತ್ಯಾದಿ ವಿಚಾರಗಳಲ್ಲಿ ಎರಡು ಆಡಳಿತದ ನಡುವೆ ನಿರಂತರ ಜಟಾಪಟಿ ಸಾಮಾನ್ಯವಾಗಿದೆ.

3 ಲಕ್ಷ ಲೀಟರ್ ನೀರು ಬೇಕು

ಇದು ಒಂದು ಅಂದಾಜು ಅಷ್ಟೇ. ಇನ್ನು ಪ್ರತಿ ಮನೆಮನೆಗೆ, ಪ್ರತಿ ಹೋಟೆಲ್‍ಗೆ, ಬಾರ್‍ಗಳಿಗೆ, ಸಣ್ಣ ಪುಟ್ಟ ಅಂಗಡಿಗಳಿಗೆ, ಶಾಲಾ-ಕಾಲೇಜುಗಳಿಗೆ ಹೋಗಿ ವಿಚಾರಿಸಿದಾಗ ಮತ್ತಷ್ಟು ಗಂಭೀರ ಚಿತ್ರಣ ಸಿಗಬಹುದು. ಗೋಣಿಕೊಪ್ಪಲು ಗ್ರಾ.ಪಂ. ಸುಪರ್ದಿಯಲ್ಲಿ 6/7 ಓವರ್ ಹೆಡ್ ನೀರಿನ ಟ್ಯಾಂಕ್‍ಗಳಿದ್ದು, ಹೆಚ್ಚಿನವು 50,000 ಲೀಟರ್ ಸಾಮಥ್ರ್ಯದವು. ಒಟ್ಟಾರೆ ದಿನಕ್ಕೆ 5 ಲಕ್ಷ ಲೀಟರ್ ನೀರು ಸಂಗ್ರಹಕ್ಕೆ ಅಗತ್ಯವಾದ ಟ್ಯಾಂಕ್‍ಗಳಿವೆ ಎನ್ನಲಾಗಿದ್ದು, ಇದೀಗ ಗೋಣಿಕೊಪ್ಪಲಿನಲ್ಲಿ ಖಾಸಗಿ ಕೊಳವೆ ಬಾವಿಗಳ ಹೆಚ್ಚಳ ಹಿನ್ನೆಲೆ ಫೆಬ್ರವರಿ ತಿಂಗಳಿನಲ್ಲಿ 15 ಕೊಳವೆ ಬಾವಿಗಳಿಂದ ಎರಡು ದಿನಕ್ಕೆ ಅರ್ಧದಷ್ಟು ಮಾತ್ರ ನೀರು ದಾಸ್ತಾನು ಸಾಧ್ಯ. ಕೆಲವು ಕೊಳವೆ ಬಾವಿಗಳು ನೀರಿಲ್ಲದೆ ನಿಷ್ಫ್ರಯೋಜಕ ಆಗಿವೆ ಎನ್ನುವದು ಪಂಚಾಯಿತಿ ನೀರು ನಿರ್ವಾಹಕರ ಮಾತು. ಈ ನಡುವೆ ಮೋಟಾರು ಅಳವಡಿಕೆಯಿಂದ ಪ್ರಾಮಾಣಿಕ ನೀರು ಸಂಪರ್ಕ ಹೊಂದಿರುವ ನಿವಾಸಿಗಳಿಗೆ ಆಗುವ ಅನ್ಯಾಯ ಬೇರೆ.

ನೆನೆಗುದಿಗೆ ಬಿದ್ದಿರುವ ಯೋಜನೆ

ವೀರಾಜಪೇಟೆ ತಾಲೂಕಿನ 20 ಗ್ರಾ.ಪಂ.ಗಳಿಗೆ ಸಮಗ್ರ ಕುಡಿಯುವ ನೀರು ಯೋಜನೆಗೆ ಕಾವೇರಿ ನೀರಾವರಿ ನಿಗಮದಿಂದ ರೂ. 30 ಕೋಟಿ ಬಿಡುಗಡೆಗೊಂಡಿದೆ, ಇನ್ನೇನು ಕಾಮಗಾರಿ ಆರಂಭ ಎಂದು ಹೇಳುತ್ತಲೇ 10 ವರ್ಷ ಕಳೆದು ಹೋಗಿದೆ. ಇತ್ತ ಕಕ್ಕಟ್ಟು - ಕೊಂಗಣ ಹೊಳೆಯಿಂದ, ಬರಪೆÇಳೆಯಿಂದ ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ನೀಲಿ ನಕಾಶೆ ಸಿದ್ಧವಿದೆ ಎನ್ನಲಾದರೂ ಯೋಜನೆ ನಿದ್ರಿಸುತ್ತಿದೆ.

ದೇವರಾಜ ಅರಸು ಕಾಲದಲ್ಲಿಯೇ ಪಿರಿಯಾಪಟ್ಟಣ, ಹುಣಸೂರು ತಾಲೂಕಿನ ರೈತರ ಬಾಳನ್ನು ಹಸನು ಮಾಡಲು ಬರಪೆÇಳೆಗೆ ‘ಕಂಬದ ಕಡ ಆಣೆಕಟ್ಟು’ ಯೋಜನೆ ಜಾರಿಗೊಂಡಿದ್ದು, ಸರ್ಕಾರದ ದಾಖಲೆಯಲ್ಲಿ ಇನ್ನೂ ಜೀವಂತವಿದೆ! ಇದೀಗ ಹುಣಸೂರು ಶಾಸಕರೂ ಲಕ್ಷಣ ತೀರ್ಥ ನದಿ ಮಾರ್ಗ ಬರಪೆÇಳೆ, ಕಕ್ಕಟ್ಟು ಕೊಂಗಣ ನೀರನ್ನು ಕೊಂಡೊಯ್ಯಲು ಉತ್ಸುಕರಾಗಿದ್ದಾರೆ. ನಮ್ಮ ಹೋರಾಟಗಾರರು ಇನ್ನಾದರೂ ಎಚ್ಚೆತ್ತು ವೀರಾಜಪೇಟೆ ತಾಲೂಕಿನ ಕನಿಷ್ಟ 30 ಗ್ರಾ.ಪಂ.ಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಮೀನಾ-ಮೇಷ ಎಣಿಸುತ್ತಿರುವ ಕಾವೇರಿ ನೀರಾವರಿ ನಿಗಮದ ವಿರುದ್ಧ ಹೋರಾಟ ಮಾಡಿದ್ದೇ ಆದಲ್ಲಿ ಏನಾದರೂ ಉತ್ತಮ ಫಲಿತಾಂಶ ಕಾಣಲು ಸಾಧ್ಯ. ಇಲ್ಲವೆ ಇಂದು ಗೋಣಿ ಕೊಪ್ಪಲು ನಗರವನ್ನು ಕಾಡುತ್ತಿರುವ ನೀರಿನ ಬರ ಎಲ್ಲ ಗ್ರಾ.ಪಂ.ಗಳನ್ನೂ ಹಂತ ಹಂತವಾಗಿ ಆವರಿಸಿ ಕೊಳ್ಳಬಹುದು. ಕಾವೇರಿ ತವರಿನಲ್ಲಿ ಕುಡಿಯುವ ನೀರಿನ ಹಾಹಾಕಾರ ನಿತ್ಯವೂ ಕಾಡಬಹುದು.

- ಟಿ.ಎಲ್. ಶ್ರೀನಿವಾಸ್