ಸಿದ್ದಾಪುರ, ಮಾ. 2: ಜಿಲ್ಲೆಯ ಗ್ರಾಮೀಣ ಭಾಗದ ಕ್ರಿಕೆಟ್ ಆಟಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿಟಿ ಬಾಯ್ಸ್ ಯುವಕ ಸಂಘ ಆಯೋಜಿಸುತ್ತಿರುವ ಕೆಸಿಎಲ್ ಕ್ರಿಕೆಟ್ ಪಂದ್ಯಾಟ ಗ್ರಾಮೀಣ ಭಾಗದ ಕ್ರಿಕೆಟ್ ಪ್ರತಿಭೆಗಳಿಗೆ ಅದ್ಭುತ ವೇದಿಕೆಯಾಗಿದೆ ಎಂದು ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎನ್. ವಾಸು ಅಭಿಪ್ರಾಯಪಟ್ಟರು.

ಇಲ್ಲಿನ ಕರಡಿಗೋಡು ರಸ್ತೆಯಲ್ಲಿ ಕೆಸಿಎಲ್ ಕ್ರೀಡಾಕೂಟದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ಪೂರೈಸಿರುವ ಕೆಸಿಎಲ್ ಕ್ರಿಕೆಟ್ ಪಂದ್ಯಾಟದಿಂದಾಗಿ ಜಿಲ್ಲೆಯ ಎಲ್ಲಾ ಆಟಗಾರರು ಒಂದೇ ಕಡೆ ಸೇರುತ್ತಿರುವದರಿಂದ ಪರಸ್ಪರ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗಿದೆ. ಕೆಸಿಎಲ್ ಮೂರನೇ ಆವೃತ್ತಿ ಮತ್ತಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಗ್ರಾ.ಪಂ. ಸದಸ್ಯ ರೆಜಿತ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ಆರಂಭಿಸಿರುವ ಕ್ರಿಕೆಟ್ ಪಂದ್ಯಾಟವು ಕಳೆದ ಎರಡು ವರ್ಷಗಳಿಂದ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿದ್ದು, ಕೆಸಿಎಲ್‍ನಿಂದಾಗಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಕ್ರೀಡಾಕೂಟಕ್ಕೆ ದಾನಿಗಳ ಕೊಡುಗೆ ಅಪಾರವಾಗಿದೆ ಎಂದರು.

ಈ ಸಂದರ್ಭ ಕೆಸಿಎಲ್ ಸಮಿತಿ ಅಧ್ಯಕ್ಷ ಸುರೇಶ್ ಬಿಳಿಗೇರಿ, ಸಿಟಿ ಬಾಯ್ಸ್ ಯುವಕ ಸಂಘದ ಕಾರ್ಯದರ್ಶಿ ಮುಸ್ತಫ, ಕೊಡಗು ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಡೋಮಿನೋಸ್ ಕಲಾ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಶೌಕತ್, ಪ್ರಮುಖರಾದ ಡೈಮಂಡ್ ಜಂಶೀದ್, ರಜಾಕ್ ಚೆನ್ನಯ್ಯನಕೋಟೆಯ ಸಾಗರ್, ಯುವಕ ಸಂಘದ ಅಧ್ಯಕ್ಷ ರತೀಶ್, ಕಲೀಲ್ ಮತ್ತಿತರರು ಇದ್ದರು.