ಕೂಡಿಗೆ, ಮಾ. 2 : ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಹರಿಯುವ ಕಾವೇರಿ ನದಿಯಲ್ಲಿ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊರ್ವ ಮುಖ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.

ಹಾಸನ ಜಿಲ್ಲೆಯ ಅರಸಿಕೆರೆ ಹೊಯ್ಸಳೇಶ್ವರ ಕಾಲೇಜಿನ ಪ್ರಥಮ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಡಿ.ಆರ್.ವಿನೋದ್ (24) ಮೃತ ಪಟ್ಟಿರುವ ದುರ್ದೈವಿ.

ವಿನೊದ್, ಉಪನ್ಯಾಸಕರು ಮತ್ತು ಸ್ನೇಹಿತರು ಸೇರಿ ಒಟ್ಟು 30 ಮಂದಿ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಸಂದರ್ಭ ಮಡಿಕೇರಿಗೆ ತೆರಳುವಾಗ ಶುಕ್ರವಾರ ಬೆಳಿಗ್ಗೆ ಕಣಿವೆ ರಾಮಲಿಂಗೇಶ್ವರ ದೇವಸ್ಥಾನದ ಬಳಿ ವಾಹನ ನಿಲ್ಲಿಸಿ ಕಾವೇರಿ ನದಿಯಲ್ಲಿ ತನ್ನ ಸ್ನೇಹಿತರೊಂದಿಗೆ ಮುಖ ತೊಳೆಯಲು ಇಳಿದ ಸಂದರ್ಭ ಕಾಲು ಜಾರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮುಳುಗು ತಜ್ಞ ರಾಮಕೃಷ್ಣ ನದಿಯಲ್ಲಿ ಮುಳುಗಿ ವಿನೋದ್ ಶವವನ್ನು ಹೊರತೆಗೆದರು.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್‍ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.