ಶ್ರೀಮಂಗಲ, ಮಾ. 2: ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಶ್ರೀ ಪೊನ್ಯ ಭಗವತಿ ದೇವಸ್ಥಾನದ ಸಮೀಪವಿರುವ ದೇವರ ಕಾಡುವಿನ ಸುತ್ತಲು ಹಿಟಾಚಿ ಯಂತ್ರದ ಮೂಲಕ ಬೃಹತ್ ಕಂದಕ ನಿರ್ಮಿಸಿ ದೇವರ ಕಾಡಿನ ಗಡಿಯನ್ನು ಗುರುತಿಸಲು ಅರಣ್ಯ ಇಲಾಖೆ ಮುಂದಾದ ಸಂದರ್ಭ ಗ್ರಾಮಸ್ಥರು ತಡೆ ಮಾಡಿರುವ ಘಟನೆ ನಡೆದಿದೆ.
ಯಾವದೇ ಪೂರ್ವ ಮಾಹಿತಿ ಇಲ್ಲದೆ ಏಕಾಏಕಿ ಅರಣ್ಯ ಇಲಾಖೆ ಹಿಟಾಚಿ ಮೂಲಕ ಸರಹದ್ದುಗಳಲ್ಲಿ ಕಂದಕ ನಿರ್ಮಿಸಲು ಮುಂದಾಗಿದ್ದು, ಹಲವು ಶÀತಮಾನದಿಂದ ದೇವರ ಕಾಡನ್ನು ಗ್ರಾಮಸ್ಥರು ರಕ್ಷಿಸುತ್ತ ಬಂದಿದ್ದಾರೆ. ಆದರೆ, ಈ ದೇವಕಾಡಿನ ಸುತ್ತಲು ಬೃಹತ್ ಹಿಟಾಚಿ ಯಂತ್ರ ತೆರಳುವದರಿಂದ ಬಹಳಷ್ಟು ಮರ ಗಿಡಗಳಿಗೆ ಹಾನಿಯಾಗಲಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯವಾಗಿ ಈ ದೇವರ ಕಾಡಿನ ಒಟ್ಟು ವಿಸ್ತೀರ್ಣ, ಈಗ ಇರುವ ವಿಸ್ತೀರ್ಣ, ಒತ್ತುವರಿಯಾಗಿರುವ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿ ನಂತರ ಸರ್ವೇ ಮಾಡಿ ಹದ್ದುಬಸ್ತು ಗುರುತಿಸಬೇಕು. ನಂತರ ಕಾಂಕ್ರಿಟ್ ಕಂಬಗಳನ್ನು ಬಳಸಿ ತಂತಿ ಬೇಲಿಯನ್ನು ಹಾಕಿ ದೇವರ ಕಾಡನ್ನು ರಕ್ಷಿಸಬೇಕು. ಹಿಟಾಚಿ ಮೂಲಕ ಕಂದಕ ನಿರ್ಮಾಣ ಮಾಡುವ ಅಗತ್ಯ ಇಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಒಪ್ಪಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಸೂಚಿಸಿದ ಅಗತ್ಯ ಕ್ರಮಗಳನ್ನು ಜಾರಿಗೆ ತಂದು ಅದರ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಹೇಳಿ ಹಿಟಾಚಿಯನ್ನು ವಾಪಾಸು ಒಯ್ದರು.
ಈ ಸಂದರ್ಭ ಅರಣ್ಯ ಇಲಾಖೆಯ ಪೊನ್ನಂಪೇಟೆ ವಿಭಾಗದ ಸಿಬ್ಬಂದಿಗಳಾದ ಜನಾರ್ಧನ್, ಸಂಜಯ್, ಪೊರಾಡು ಊರು ಪಂಚಾಯಿತಿಯ ಅಧ್ಯಕ್ಷ ಮಿದೇರಿರ ಮಂಜುನಾಥ್, ಕಾರ್ಯದರ್ಶಿ ಬಲ್ಯಮಿದೇರಿರ ಸಂಪತ್ ಕಾರ್ಯಪ್ಪ, ಮಾಜಿ ಅಧ್ಯಕ್ಷ ಕಾಯಪಂಡ ಅಯ್ಯಪ್ಪ, ಹಿರಿಯರಾದ ಮಿದೇರಿರ ವಿಜಯ, ವಸಂತ್ ಕುಮಾರ್, ಅಣ್ಣೀರ ವಿಜು ಪೂಣಚ್ಚ, ಅಣ್ಣೀರ ಸೋನಿ ಕುಮಾರ್, ಬಲ್ಯಮಿದೇರಿರ ಗಣಪತಿ, ವಿಜಯಪ್ರಸಾದ್, ಮಲ್ಲೇಂಗಡ ಕೀರ್ತಿ ಮತ್ತಿತರರು ಹಾಜರಿದ್ದರು.