ಮಡಿಕೇರಿ, ಮಾ. 2: ‘ಸಂತೆಗ್ಹೋಗುವ ರೈತನ ‘ಕಳ್ಳಿನ' ಆಸೆ, ಕೃಷಿಯೊಂದಿಗೆ ಬಾಲ್ಯದ ಒಡನಾಟಗಳ ನೆನಪು..., ಕೊಡಗಿನ ಅರೆಭಾಷಿಕರ ಗತ್ತು- ಗಮ್ಮತ್ತು, ಮನದಲ್ಲಡಗಿದ ಪ್ರೀತಿಯ ಕಿಡಿ, ವಯಸ್ಸಾದವರ ಪಾಡು - ಫಜೀತಿ, ಅತ್ತೆಮಗಳ ಮೇಲಿನ ಪ್ರೀತಿಯ ಕನವರಿಕೆಗಳು...’ ಇವೆಲ್ಲವೂ ಒಂದೇ ವೇದಿಕೆಯಲ್ಲಿ ಒಂದರ ಹಿಂದೆ ಒಂದರಂತೆ ರಸಭರಿತವಾಗಿ ಮೂಡಿಬಂದವು. ಅದರಲ್ಲೂ ಅರೆಭಾಷೆಯಲ್ಲಿ ಮೂಡಿಬಂದ ಕವಿಗಳ ಈ ಸಾಲುಗಳು ನೆರೆದಿದ್ದ ಕವಿ ಮನಸುಗಳನ್ನು ಸೂರೆಗೊಂಡರೆ, ಪದಗಳಿಗೆ ತಕ್ಕಂತೆ ಹಿಂಬದಿಯಲ್ಲಿ ಕುಂಚದಲ್ಲಿ ಕಲಾವಿದರ ಕರಗಳಲ್ಲಿ ಮೂಡಿಬರುತ್ತಿದ್ದ ಚಿತ್ರಪಟಗಳು ಕಣ್ಮನ ತಣಿಸಿದವು. ಈ ಎರಡೂ ಕಲಾ ಪ್ರಾಕಾರಗಳ ಪ್ರತಿಭೆಗಳು ಹೊರಹೊಮ್ಮಿದ್ದು ಇಂದು ನಡೆದ ‘ಕವನ- ಕುಂಚ’ ಕಾರ್ಯಕ್ರಮದಲ್ಲಿ...ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜಿಲ್ಲೆಯಲ್ಲಿ ಪ್ರಥಮ ಕಾರ್ಯಕ್ರಮವಾದ ಕವನ- ಕುಂಚ ಕಾರ್ಯಕ್ರಮ ಕೊಡಗು ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಯಿತು.

ಕವಿಗಳಾಗಿ ಭಾಗವಹಿಸಿದ್ದ ಡಾ. ಕರುಣಾಕರ ನಿಡಿಂಜಿ ಅವರು ತಮ್ಮ ‘ಸಾಂತನ ಪಂಚೆ' ಕವನದಲ್ಲಿ ರೈತನೋರ್ವ ಕೋಣದೊಂದಿಗೆ

(ಮೊದಲ ಪುಟದಿಂದ) ಸಂತೆಗೆ ಹೋಗುವಾಗ ಸಾರಾಯಿಯ ನೆನಪಾಗಿ ಪಡುವ ಪಡಿಪಾಟಲಿನ ಬಗ್ಗೆ ಹಾಸ್ಯಭರಿತವಾಗಿ ಬಣ್ಣಿಸಿದರು. ಶಿವದೇವಿ ಅವನೀಶ್ಚಂದ್ರ ಅವರು ತಮ್ಮ ಸುದೀರ್ಘ ಕವನದಲ್ಲಿ ಬಾಲ್ಯದಲ್ಲಿ ಅಪ್ಪನೊಂದಿಗೆ ಕೃಷಿಯಲ್ಲಿ ತೊಡಗುವದರೊಂದಿಗೆ ಗೆಳೆಯರೊಂದಿಗೆ ಆಟ, ಹೊಡೆದಾಟದೊಂದಿಗೆ ಬಾಲ್ಯದ ನೆನಪನ್ನು ಮರುಕಳಿಸಿದರು. ಕುಲ್ಲಚನ ಕಾರ್ಯಪ್ಪ ಅವರು ‘ಚಾಂಪನ ಭಜನೆ'ಯನ್ನು ಹಾಸ್ಯಭರಿತವಾಗಿ ಬಣ್ಣಿಸಿದರು. ಎಸ್.ಕೆ. ಈಶ್ವರಿ ಅವರು ‘ವಯಸ್ಸಾದ ಕಾಲ’ದಲ್ಲಿ ನಮ್ಮನ್ನು ಸಾಕಿ ಸಲಹಿದವರನ್ನು ವೃದ್ಧಾಶ್ರಮಕ್ಕೆ ಅಟ್ಟುವ ವಾಸ್ತವ ಚಿತ್ರಣವನ್ನು ತೆರೆದಿಟ್ಟರು. ತೆಕ್ಕಡೆ ಕುಮಾರಸ್ವಾಮಿ ಅವರು ‘ಸೃಷ್ಟಿಲಿ ವ್ಯತ್ಯಾಸಗ’ ಕವನದಲ್ಲಿ ಭಗವಂತನಿದ್ದಾನೋ, ನೆನೆಯಬೇಕೋ ಬೇಡವೋ ಎಂಬ ಜಿಜ್ಞಾಸೆಯನ್ನು ಬಿಚ್ಚಿಟ್ಟರು.

ಸೆಟ್ಟೇಜನ ಗೀತಾ ಪದ್ಮನಾಭ ಅವರು, ‘ಕೊಡಗು ನಮ್ಮದ್’ ಎಂದು ಕೊಡಗಿನ ಸಿರಿ ವೈಭವ, ಗೌಡರ ವೀರ ಪರಂಪರೆ, ಸಂಪ್ರದಾಯ, ಉಡುಗೆ- ತೊಡುಗೆಗಳ ಬಗ್ಗೆ ವರ್ಣಿಸಿದರು. ಬಾರಿಕೆ ಶೈಲಜಾ ಅವರು ‘ಕಿಡಿಯಾಗಿನಾ’ ಎಂದು ತಮ್ಮ ಮನದಲ್ಲಡಗುವ ಪ್ರಿಯತಮನಿಗಾಗಿನ ಕಿಡಿಯನ್ನು ಹೊರಹಾಕಿದರು. ಮಾಧವ ಚೆಂಬು ‘ದೊಡ್ಡತ್ತೆ ಮಗ್ಳು ಮೀನಾ’ ಮನೆಗೆ ಬಾ ಎಂದು ಅತ್ತೆ ಮಗಳ ಮೇಲಿನ ಪ್ರೀತಿಯ ಒಡನಾಟವನ್ನು ನಡು ನಡುವೆ ಮಿಮಿಕ್ರಿಯೊಂದಿಗೆ ತೆರೆದಿಟ್ಟರು.

ಕುಂಚದ ಮೋಡಿ

ಇತ್ತ ಕವಿಗಳು ತಮ್ಮ ಕವನ ವಾಚನ ಮಾಡುತ್ತಿದ್ದರೆ, ಅತ್ತ ಇನ್ನೊಂದು ಬದಿಯಲ್ಲಿ ಕಲಾವಿದರಾದ ಕೋಡಿ ಭರತ್ ಹಾಗೂ ಮೂಡಗದ್ದೆ ಕೌಶಿಕ್ ಅವರುಗಳ ಕೈಗಳು ಬಣ್ಣದ ಕುಂಚದೊಂದಿಗೆ ಖಾಲಿ ಹಾಳೆಗಳಲ್ಲಿ ನಲಿದಾಡುತ್ತಿದ್ದವು. ಕವನದಲ್ಲಿನ ಸಾರಗಳಿಗೆ ತಕ್ಕಂತೆ ತಮ್ಮದೇ ಕಲ್ಪನೆಯಲ್ಲಿ ಬಿಡಿಸುತ್ತಿದ್ದ ಚಿತ್ರಗಳು ಮನರಂಜಿಸಿದವು.

ವಿಶ್ವಕ್ಕೆ ಪಸರಿಸುವಂತಾಗಲಿ

ಅರೆಭಾಷೆ ಸಂಸ್ಕøತಿ, ಆಚಾರ, ವಿಚಾರ ಇಡೀ ವಿಶ್ವಕ್ಕೆ ಪಸರಿಸುವಂತಾಗಲಿ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.

ಕವನ ಕುಂಚ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಈ ಕಾರ್ಯಕ್ರಮಗಳು ರಾಜ್ಯ ಮತ್ತು ರಾಷ್ಟ್ರದೆಲ್ಲೆಡೆ ನಡೆಯುವಂತಾಗಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಅವರು ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿಯ ಮೂರು ವರ್ಷಗಳ ಕಾರ್ಯಚಟುವಟಿಕೆಗಳ ಪಕ್ಷಿನೋಟ ‘ಸಫಲ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಅರೆಭಾಷೆ ಸಂಸ್ಕøತಿ, ನಡೆ-ನುಡಿ, ಆಚಾರ ವಿಚಾರಗಳ ಬಗ್ಗೆ ಮಾಹಿತಿ ನೀಡುವಲ್ಲಿ ಅಕಾಡೆಮಿ ಮುಂದಾಗಿದೆ. ಇಂತಹ ಕಾರ್ಯ ಚಟುವಟಿಕೆಗಳು ಇನ್ನಷ್ಟು ನಡೆಯಬೇಕಿದೆ ಎಂದು ಹೇಳಿದರು.

ಸರ್ಕಾರ ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಸಾಂಸ್ಕøತಿಕ ಚಟುವಟಿಕೆಗಳನ್ನು ಆಯೋಜಿಸುವಂತಾಗಬೇಕು ಎಂದು ನುಡಿದರು.

ಯುವ ಜನರು ಮಾತೃ ಭಾಷೆಯನ್ನು ಪ್ರೀತಿಸಬೇಕು. ಮನೆ ಭಾಷೆಯನ್ನು ಉಳಿಸಿ ಬೆಳೆಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡವ, ಅರೆಭಾಷೆಯನ್ನು ಮಾತನಾಡಲು ಹಿಂಜರಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸಂಪ್ರದಾಯ ಮರೆತರೆ, ಮೂಲ ಸಂಸ್ಕøತಿಯನ್ನು ಮರೆತಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಗರಸಭೆ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಮಾತನಾಡಿ, ಅರೆಭಾಷೆ ಬೆಳವಣಿಗೆ ಮಾಡುವ ನಿಟ್ಟಿನಲ್ಲಿ ಮಹಿಳೆಯರು ಮುಂದಾಗಬೇಕು. ಪೋಷಕರು ಮಕ್ಕಳಿಗೆ ಅರೆಭಾಷೆಯನ್ನು ಕಲಿಸಬೇಕು. ಅರೆಭಾಷೆ ಆಚಾರ, ವಿಚಾರ ಪದ್ಧತಿಯನ್ನು ಮಕ್ಕಳಿಗೆ ತಿಳಿಸಬೇಕು ಎಂದು ಸಲಹೆ ಮಾಡಿದರು.

ತಾ.ಪಂ.ಅಧ್ಯಕೆÀ್ಷ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ ಎಲ್ಲ ಭಾಷೆಯನ್ನು ಕಲಿಯಬೇಕು. ಜೊತೆಗೆ ಜನಾಂಗದ ಭಾಷೆ, ಸಮಾಜವನ್ನು ಗೌರವಿಸಬೇಕು ಎಂದು ಹೇಳಿದರು.

ಅರೆಭಾಷೆ ಸಂಸ್ಕøತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ, ಅರೆಭಾಷೆ ಅಕಾಡೆಮಿ ವತಿಯಿಂದ ಅರೆಭಾಷೆ ಪದಕೋಶ ಪುಸ್ತಕ ಹೊರತರಲು ಚಿಂತನೆ ಮಾಡಲಾಗಿದೆ. ಹಾಗೆಯೇ ಅರೆಭಾಷೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ಅರೆಭಾಷೆ ಯಕ್ಷಗಾನ ತಂಡ ರಚಿಸಿ ತರಬೇತಿ ನೀಡಲು ಅಕಾಡೆಮಿ ಮುಂದಾಗಿದೆ. ಹಾಗೆಯೇ ಮಂಗಳೂರು ವಿವಿಯಲ್ಲಿ ಅರೆಭಾಷೆ ವಿದ್ಯಾಪೀಠ ಸ್ಥಾಪಿಸಲು ಮಂಗಳೂರು ವಿವಿ ಜೊತೆ ಮಾತುಕತೆ ನಡೆದಿದೆ ಎಂದು ಪಿ.ಸಿ.ಜಯರಾಮ ವಿವರಿಸಿದರು.

ಸುಳ್ಯದಲ್ಲಿ ಅರೆಭಾಷೆ ಸಾಂಸ್ಕøತಿಕ ಗ್ರಾಮ ಸ್ಥಾಪಿಸಲು ಚಿಂತನೆ ಮಾಡಲಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕವನ ಕುಂಚ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಮಾತನಾಡಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮಗಳು ಪುಸ್ತಕಗಳ ರೂಪದಲ್ಲಿ ದಾಖಲಾಗಬೇಕು ಎಂದು ಸಲಹೆ ಮಾಡಿದರು.

ಕವಿಗೋಷ್ಠಿ ಬಗ್ಗೆ ವಿಶ್ಲೇಷಣೆ ಮಾಡಿದ ಡಾ. ವಿಶ್ವನಾಥ್ ಬದಿಕಾನ ಅವರು, ಈ ಅಕಾಡೆಮಿಯಲ್ಲಿ ಕರ್ನಾಟಕ, ಅರೆಭಾಷೆ, ಸಂಸ್ಕøತಿ ಮತ್ತು ಸಾಹಿತ್ಯ ಎಂಬ ನಾಲ್ಕು ವಿಚಾರಗಳು ಅಡಕಗೊಂಡಿದ್ದು, ಇದೊಂದು ರಾಜ್ಯದಲ್ಲಿಯೇ ವಿಶೇಷ ಅಕಾಡೆಮಿಯಾಗಿದೆ ಎಂದು ಬಣ್ಣಿಸಿದರು. ಭಾಷೆ, ಸಂಸ್ಕøತಿ ಒಟ್ಟಿಗೆ ಇದ್ದಾಗ ಸಾಹಿತ್ಯ ಸೇರಿಕೊಳ್ಳುತ್ತದೆ. ಕೊಡಗು, ಸುಳ್ಯ, ಕಾಸರಗೋಡಿನ ಕೆಲವು ಭಾಗ ಸೇರಿಸಿ ಅರೆಭಾಷೆ ಪ್ರದೇಶವೆಂದು ಗುರುತಿಸಬೇಕೆಂದು ಸಲಹೆ ಮಾಡಿದರು. ಅರೆಭಾಷೆ ಒಂದು ಸಮುದಾಯದ ಭಾಷೆಯಾಗಿದ್ದು, ಪಠ್ಯಪುಸ್ತಕ ರಚನೆ ಕಷ್ಟವಿದೆ. ಅದಕ್ಕೂ ಮುನ್ನ ಪದಕೋಶ ತಯಾರಿಸಬೇಕಿದೆ. ಕೊಡಗು ಸಣ್ಣ ಜಿಲ್ಲೆಯಾದರೂ ಸಂಸ್ಕøತಿ ದೊಡ್ಡದು. ಕವನ ರಚನೆ, ಚಿತ್ರ ಬಿಡಿಸುವದು ಒಂದು ಸೃಜನಾತ್ಮಕ ಕಲೆಯಾಗಿದೆ. ಇಂದಿನ ಕವಿಗೋಷ್ಠಿಯಲ್ಲಿ ವಾಚಿಸಲ್ಪಟ್ಟ ಕನವಗಳೆಲ್ಲವೂ ಉತ್ತಮವಾದುವು ಎಂದು ಹೇಳಿದರು.

ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕೊಲ್ಯದ ಗಿರೀಶ್ ಶುಭ ಹಾರೈಸಿದರು. ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ಫೆಡರೇಷನ್ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ ಮಾದಪ್ಪ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕೆÀ್ಷ ಕುಂಜಿಲನ ಮುತ್ತಮ್ಮ ಮಾತನಾಡಿದರು.

ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕರಾದ ಬಾರಿಯಂಡ ಜೋಯಪ್ಪ, ಕಡ್ಲೇರ ತುಳಸಿ ಮೋಹನ್ ಕವಿಗೋಷ್ಠಿ ನಡೆಸಿಕೊಟ್ಟರು. ಸದಸ್ಯ ಬೇಕಲ್ ದೇವರಾಜು ನಿರೂಪಿಸಿದರು. ಕುಂಬಗೌಡನ ಪ್ರಸನ್ನ ವಂದಿಸಿದರು. ಬಳಿಕ ಲಿಟ್ಲ್‍ಪ್ಲವರ್ ವಿದ್ಯಾಸಂಸ್ಥೆ ಮಕ್ಕಳು ಹಾಗೂ ಭರಣಿ ಕಲಾ ತಂಡದವರಿಂದ ಸಾಂಸ್ಕøತಿಕ ಕಾರ್ಯಕ್ರಮ ಮೂಡಿ ಬಂದವು.