ಸೋಮವಾರಪೇಟೆ, ಮಾ. 3: ಕೊಡಗು ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ತಾಲೂಕು ಬಿಜೆಪಿ ಸಹಯೋಗದೊಂದಿಗೆ ತಾ. 6ರಂದು ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ ತಿಳಿಸಿದ್ದಾರೆ.

ತಾ. 6ರಂದು ಬೆಳಿಗ್ಗೆ 10 ಗಂಟೆಯಿಂದ ಉದ್ಯೋಗ ಮೇಳ ನಡೆಯಲಿದ್ದು, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ನವೀನ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ ಅವರುಗಳ ವಿಶೇಷ ಆಸಕ್ತಿಯ ಮೇರೆ 20ಕ್ಕೂ ಅಧಿಕ ಕಂಪೆನಿಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಕನಿಷ್ಟ 10ನೇ ತರಗತಿ ಉತ್ತೀರ್ಣ /ಅನುತ್ತೀರ್ಣಗೊಂಡವರು ಸೇರಿದಂತೆ ಇತರ ವ್ಯಾಸಂಗ ಮಾಡಿರುವವರು, ತಾಂತ್ರಿಕ ಶಿಕ್ಷಣ ಪೂರೈಸಿರುವವರು, ವಿದ್ಯಾವಂತ ಯುವಕ / ಯುವತಿಯರು ಉದ್ಯೋಗ ಮೇಳದ ಪ್ರಯೋಜನ ಪಡೆಯಬಹುದು.

ಇದೇ ಸಂದರ್ಭ ಬಿಜೆಪಿ ವತಿಯಿಂದ ಜಾಬ್ ಪೋರ್ಟಲ್ ವೆಬ್‍ಸೈಟ್‍ಗೆ ಚಾಲನೆ ದೊರೆಯಲಿದ್ದು, ಈ ವೆಬ್‍ಸೈಟ್‍ನಲ್ಲಿ ವರ್ಷಪೂರ್ತಿ ಉದ್ಯೋಗ ಮಾಹಿತಿ ಲಭಿಸಲಿದೆ. ನಿರುದ್ಯೋಗಿ ಯುವ ಜನಾಂಗ ಇದರ ಸದುಪಯೋಗ ಪಡೆದುಕೊಳ್ಳಬಹುದು. ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊ: 9448433309 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮನುಕುಮಾರ್ ಮನವಿ ಮಾಡಿದರು.