ಸೋಮವಾರಪೇಟೆ, ಮಾ. 2: ಇಂದಿನಿಂದ ಪ್ರಾರಂಭವಾಗುವ ಸುರಕ್ಷಾ ಯಾತ್ರೆಗೆ ಕೊಡಗಿನಿಂದ 10 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕೊಡಗು ಬಿಜೆಪಿ ವಕ್ತಾದ ಅಭಿಮನ್ಯುಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 3ರಂದು (ಇಂದು) ಬೆಳಿಗ್ಗೆ 10.30ಕ್ಕೆ ಕುಶಾಲನಗರದಲ್ಲಿ ಯಾತ್ರೆಗೆ ಚಾಲನೆ ದೊರಕಲಿದ್ದು, ನಂತರ ಗುಡ್ಡೆಹೊಸೂರು, ಸುಂಟಿಕೊಪ್ಪ, ಮಡಿಕೇರಿಗೆ ತೆರಳಿ ಸಂಜೆ 4 ಗಂಟೆಗೆ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮಂಗಳೂರಿನಲ್ಲಿ ತಾ. 6ರಂದು ನಡೆಯುವ ಸಮಾವೇಶದಲ್ಲಿ ಕೊಡಗಿನಿಂದ 10 ಸಾವಿರಕ್ಕೂ ಅಧಿಕ ಹಿಂದೂಪರ ಸಂಘಟನೆಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಿಂದೂ ಸಮಾಜಕ್ಕೆ ಅಭದ್ರತೆ ಕಾಡಲಾರಂಭಿಸಿದೆ. ಈಗಾಗಲೇ ಹಿಂದೂಪರ ಸಂಘಟನೆಗಳ 27 ಮಂದಿ ಕಾರ್ಯಕರ್ತರ ಕೊಲೆ ನಡೆದಿದ್ದು, 26ಮಂದಿಯ ಮೇಲೆ ಕೊಲೆಯತ್ನ ನಡೆಸಲಾಗಿದೆ. ಎಲ್ಲಾ ಪ್ರಕರಣಗಳಲ್ಲೂ ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳ ಕೈವಾಡವಿದ್ದು, ಕೊಡಗಿನಲ್ಲಿ ಕುಟ್ಟಪ್ಪ, ಪ್ರವೀಣ್ ಪೂಜಾರಿ ಅವರ ಹತ್ಯೆಗಳ ಹಿಂದೆಯೂ ಇದೇ ಮೂಲಭೂತವಾದಿ ಸಂಘಟನೆಗಳ ಕೈವಾಡವಿದ್ದುದು ಸಾಬೀತಾಗಿದೆ. ಕಾಂಗ್ರೆಸ್ ಸರ್ಕಾರದ ಟಿಪ್ಪು ಮೇಲಿನ ಪ್ರೇಮಕ್ಕೆ ಕೊಡಗಿನಲ್ಲಿ 2 ಜೀವ ಬಲಿಯಾಗಿವೆ. ಕಾಂಗ್ರೆಸ್ಸಿನ ಕೆಲವರು ಟಿಪ್ಪು ಪರ ವಕಾಲತ್ತು ವಹಿಸುತ್ತಿದ್ದು, ತಾಕತ್ತಿದ್ದರೆ ಟಿಪ್ಪು ಸುಲ್ತಾನ್ ಭಾವಚಿತ್ರ ಇಟ್ಟುಕೊಂಡು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.

ಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಕಿಬ್ಬೆಟ್ಟ ಮಧು, ನಗರಾಧ್ಯಕ್ಷ ಶರತ್‍ಚಂದ್ರ, ಜಿಲ್ಲಾ ಸಮಿತಿ ಸದಸ್ಯ ಚೇತನ್ ಉಪಸ್ಥಿತರಿದ್ದರು.