ಮಡಿಕೇರಿ, ಮಾ. 2: ಸಮುದಾಯ ಸೇವೆಗಾಗಿ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ನೆಹರು ಯುವ ಕೇಂದ್ರವು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ರಾಷ್ಟ್ರೀಯ ಯುವದಳ ಸೇವಾ ಕಾರ್ಯಕರ್ತರಾಗಿ ಒಂದು ವರ್ಷದ ಅವಧಿಗೆ ಸೇವೆ ಸಲ್ಲಿಸಲು ಅರ್ಹ ಯುವಜನರಿಂದ ಅರ್ಜಿ ಆಹ್ವಾನಿಸಿದೆ.
18 ರಿಂದ 29 ವರ್ಷದೊಳಗಿರುವ ಹತ್ತನೇ ತರಗತಿಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಿರುವ ಯುವಜನರು ಹಾಗೂ ಸಂಘ, ಮಂಡಳಿಯ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 5 ಸಾವಿರವನ್ನು ಗೌರವ ಧನವಾಗಿ ನೀಡಲಾಗುವದು. ಪದವಿಪೂರ್ವ ಮತ್ತು ಪದವೀಧರ ಮಹಿಳೆಯರಿಗೂ ಆದ್ಯತೆ ನೀಡಲಾಗುವದು ಎಂದು ಅವರು ತಿಳಿಸಿದ್ದಾರೆ.
ಆಯ್ಕೆಯಾದ ಸೇವಾ ಕಾರ್ಯಕರ್ತರು ಯುವ ಹಾಗೂ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಸ್ವಚ್ಛ ಭಾರತ್ ಮಿಷನ್, ಪ್ರಧಾನಮಂತ್ರಿ ಜನ್‍ಧನ್ ಯೋಜನೆ, ಜಾಗ್ರತಾಂದೋಲನ, ಆರೋಗ್ಯ ಸಾಕ್ಷರತೆ ಹಾಗೂ ಗ್ರಾಮ ನೈರ್ಮಲ್ಯ ಇತರ ಕಾರ್ಯಕ್ರಮಗಳಲ್ಲಿ ಆಯಾಯ ತಾಲೂಕುಗಳಲ್ಲಿ ನೆಹರು ಯುವ ಕೇಂದ್ರದ ಮುಖಾಂತರ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವವರು ನಿಗದಿತ ಅರ್ಜಿ ನಮೂನೆಯನ್ನು ನೆಹರು ಯುವ ಕೇಂದ್ರದ ವೆಬ್‍ಸೈಟ್ ತಿತಿತಿ.ಟಿಥಿಞs.oಡಿg ನಿಂದ ಪಡೆದು ತಾ. 13 ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನೆಹರು ಯುವ ಕೇಂದ್ರ, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಸಿ.ಎನ್. ಯಶ್ವಂತ್ ಯಶು ನಿಲಯ ಬ್ಲಾಕ್ ನಂ. 08, ಕಾವೇರಿ ಲೇಔಟ್, ಮಡಿಕೇರಿ (08272-225470) ಇವರನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ತಿಳಿಸಿದ್ದಾರೆ.
ಯೋಜನಾ ಸಂಯೋಜಕರ ಹುದ್ದೆಗೆ ಅರ್ಜಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾಮಟ್ಟದ ಯೋಜನಾ ಸಂಯೋಜಕರು, ಕಾರ್ಯಕ್ರಮ ಸಹಾಯಕರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಸಮಾಜ ವಿಜ್ಞಾನ, ಜೀವ ವಿಜ್ಞಾನ, ಪೌಷ್ಟಿಕ, ವೈದ್ಯಕೀಯ, ಆರೋಗ್ಯ ನಿರ್ವಹಣೆ, ಸಮಾಜ ಕಾರ್ಯ, ಗ್ರಾಮೀಣ ನಿರ್ವಹಣೆ ಇವುಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸರ್ಕಾರಿ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಟ 1 ವರ್ಷಗಳ ಅನುಭವ, ಎಂ.ಎಸ್. ಆಫೀಸ್‍ನಲ್ಲಿ ಪ್ರಾವೀಣ್ಯತೆ ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಮಾಹೆಯಾನ ರೂ. 35 ಸಾವಿರ ಗೌರವಧನ ನೀಡಲಾಗುವದು.
ಜಿಲ್ಲಾಮಟ್ಟದ ಕಾರ್ಯಕ್ರಮ ಸಹಾಯಕರ ಹುದ್ದೆಗೆ ಸಮಾಜ ವಿಜ್ಞಾನ, ಸಮಾಜ ಕಾರ್ಯ, ಗ್ರಾಮೀಣ ನಿರ್ವಹಣೆ, ಸಂಖ್ಯಾ ಶಾಸ್ತ್ರ ಇವುಗಳಲ್ಲಿ ಯಾವದಾದರೊಂದು ಪದವಿ ಪಡೆದಿದ್ದು, ಸರ್ಕಾರಿ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಟ 1 ವರ್ಷಗಳ ಅನುಭವ, ಎಂ.ಎಸ್. ಆಫೀಸ್‍ನಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಮಾಹೆಯಾನ ರೂ. 20 ಸಾವಿರ ಗೌರವಧನವಾಗಿ ನೀಡಲಾಗುವದು.
ಉತ್ತಮವಾಗಿ ಕೆಲಸ ನಿರ್ವಹಿಸುವ ಬಗ್ಗೆ ದಾಖಲೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಉತ್ತಮವಾಗಿ ಪತ್ರ ವ್ಯವಹಾರ ನಿರ್ವಹಿಸಬಲ್ಲ ಹಾಗೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಓದುವ, ಬರೆಯುವ, ಮಾತನಾಡುವ, ಗಣಕಯಂತ್ರದಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ಈ ನೇಮಕಾತಿಯು 11 ತಿಂಗಳ ಅವಧಿಯಾಗಿದ್ದು ಕೆಲಸ ನಿರ್ವಹಣೆ ಆಧಾರದ ಮೇರೆಗೆ ನವೀಕರಿಸಲಾಗುವದು.
ಆಸಕ್ತ ಅಭ್ಯರ್ಥಿಗಳು ಸ್ವವಿವರಗಳುಳ್ಳ ಮಾಹಿತಿಯನ್ನು ಎಲ್ಲಾ ದೃಢೀಕೃತ ದಾಖಲೆಗಳೊಂದಿಗೆ ತಾ. 15 ರೊಳಗೆ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮಡಿಕೇರಿ 571201 ಇಲ್ಲಿಗೆ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ತಿಳಿಸಿದ್ದಾರೆ.