ಮಡಿಕೇರಿ, ಮಾ. 2: ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಮಹತ್ವ ಮತ್ತು ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಅಗತ್ಯ ಇಂದಿನ ಅನಿವಾರ್ಯತೆಯಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಅಭಿಪ್ರಾಯ ಪಟ್ಟಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ಗೆ ಅಧಿಕೃತ ಭೇಟಿ ಕಾರ್ಯಕ್ರಮ ಸಂದರ್ಭ ವಿವಿಧ ರಂಗಗಳ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ರೋಟರಿ ವಲಯ ಅಸಿಸ್ಟೆಂಟ್ ಗವರ್ನರ್ ಮಹೇಶ್ ನಲ್ವಾಡೆ ಮಾತನಾಡಿ, ರೋಟರಿ ಜಿಲ್ಲೆಯಲ್ಲಿ ಈ ಬಾರಿ ಜಾರಿಗೊಳಿಸಲಾದ 1 ಲಕ್ಷ ಸಸಿ ನೆಡುವ ಯೋಜನೆ ಗುರಿಯನ್ನೂ ಮೀರಿ ಅತ್ಯಧಿಕ ಸಸಿಗಳನ್ನು ನೆಡುವ ಮೂಲಕ ದಾಖಲೆ ಮಾಡಿದೆ ಎಂದರು.
ಮಿಸ್ಟಿ ಹಿಲ್ಸ್ನ ವಿಶೇಷ ವಾರ್ತಾ ಸಂಚಿಕೆ ಬಿಡುಗಡೆಗೊಳಿಸಿದ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ, ಮಿಸ್ಟಿ ಹಿಲ್ಸ್ಗೆ ಈ ವರ್ಷ 10 ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ತನ್ನ ಸಂಖ್ಯೆಯನ್ನು ರೋಟರಿ ಸಂಸ್ಥೆ ವೃದ್ಧಿಸಿಕೊಂಡಿದೆ ಎಂದರು.
ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ., ಮಾತನಾಡಿ, ಕಳೆದ 7 ತಿಂಗಳಿನಲ್ಲಿ 52 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಿಸ್ಟಿ ಹಿಲ್ಸ್ ನಡಿಗೆ ಜನರ ಕಡೆಗೆ ಎಂಬ ಚಿಂತನೆ ಯಶಸ್ವಿ ಹಾದಿಯಲ್ಲಿದೆ ಎಂದು ಹೇಳಿದರಲ್ಲದೇ, ಮೇ ತಿಂಗಳಲ್ಲಿ ವಲಯ ರೋಟರಿ ಸಮಾವೇಶ ಆಯೋಜಿಸುವದಾಗಿ ಪ್ರಕಟಿಸಿದರು.
ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಎಂ. ಸಂದೀಪ್ ಕ್ಲಬ್ನ ವರದಿಯ ಬಗ್ಗೆ ಪ್ರಾತಕ್ಷಿಕೆ ಮೂಲಕ ಮಾಹಿತಿ ನೀಡಿದರು. ರೋಟರಿ ಮಿಸ್ಟಿ ಹಿಲ್ಸ್ ಮುಂದಿನ ಸಾಲಿನ ಅಧ್ಯಕ್ಷ ಜಿ.ಆರ್. ರವಿಶಂಕರ್, ದಮಯಂತಿ ಚಂಗಪ್ಪ ವೇದಿಕೆಯಲ್ಲಿದ್ದರು. ಡಾ.ಸಿ.ಆರ್. ಪ್ರಶಾಂತ್, ವಿಜಯಲಕ್ಷ್ಮಿ ಚೇತನ್ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಸೇರಿದಂತೆ ಜಿಲ್ಲೆಯ ವಿವಿಧ ರೋಟರಿ ಕ್ಲಬ್ ಪ್ರಮುಖರು, ರೋಟರ್ಯಾಕ್ಟ್, ಇಂಟರ್ಯಾಕ್ಟ್ , ಇನ್ನರ್ ವೀಲ್ ಕ್ಲಬ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ರೋಟರಿ ಮಿಸ್ಟಿ ಹಿಲ್ಸ್ ನಿಂದ ಸಮಾಜದ ವಿವಿಧ ರಂಗಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಡಾನೆ ಧಾಳಿ ತಡೆಗಟ್ಟುವ ಕಾರ್ಯಪಡೆಯ ಅಧಿಕಾರಿಯಾಗಿ ಜನಮನ್ನಣೆ ಗಳಿಸಿರುವ ಕಳ್ಳೀರ ದೇವಯ್ಯ ಅವರನ್ನು ಅರಣ್ಯ ಸಂರಕ್ಷಣೆಗಾಗಿ, ಮಡಿಕೇರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ನಿರ್ದೇಶನ ನೀಡಿ ಇದೀಗ ಮೈಸೂರಿನಲ್ಲಿ ನೆಲೆಸಿರುವ ವಿದೂಷಿ ವಿನಯ ಕೃಷ್ಣಮೂರ್ತಿ, ಹೆದ್ದಾರಿಯಲ್ಲಿ ವಾಹನ ಅಪಘಾತ ಸಂದರ್ಭ 35 ವರ್ಷಗಳಿಂದ ಚಾಲಕರಿಗೆ ನೆರವಾಗಿ ನೂರಾರು ಮಂದಿಯ ಜೀವ ರಕ್ಷಿಸುತ್ತಾ ಬಂದಿರುವ ಜೋಡುಪಾಲದ ಎಸ್. ಎನ್. ಸತ್ಯನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಉದ್ಯಾನವನಕ್ಕೆ ನೆರವು ನೀಡಿದ ನಗರಸಭಾ ಸದಸ್ಯೆ ವೀಣಾಕ್ಷಿ, ಹೊಟೇಲ್ ಶಾಂತಿಸಾಗರ್, ಪುತ್ತೂರಿನ ಮಾಸ್ಟರ್ ಪ್ಲಾನರಿ ಸಂಸ್ಥೆಗಳಿಗೆ ಅಭಿನಂದನಾ ಪತ್ರ ನೀಡಲಾಯಿತು.