ಸಿದ್ದಾಪುರ, ಮಾ. 2: ಜಿಲ್ಲಾ ತುಳುವೆರೆ ಜನಪದ ಸಂಘದ ವತಿಯಿಂದ ಏ. 17 ರಂದು ಮಡಿಕೇರಿಯಲ್ಲಿ ವಿಶು ಹಬ್ಬವನ್ನು ಆಚರಿಸಲಾಗುವದೆಂದು ತುಳವೆರ ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಐತಪ್ಪ ರೈ ತಿಳಿಸಿದರು.
ಸಿದ್ದಾಪುರ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಸಿದ್ದಾಪುರ ಹೋಬಳಿಯ ತುಳುವೆರ ಸಂಘದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ತುಳು ಭಾಷಿಕ ಜನಾಂಗದವರಿದ್ದು, ಈ ಹಿನ್ನೆಲೆ ತುಳು ಜನಾಂಗದ ಆಚಾರ, ವಿಚಾರ, ಸಂಸ್ಕøತಿಯನ್ನು ಜನಾಂಗದವರಿಗೆ ತಿಳಿಸಲು ಏ. 17 ರಂದು ಮಡಿಕೇರಿಯಲ್ಲಿ ವಿಶು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವ ದೆಂದರು. ಮಡಿಕೇರಿ ಕಾವೇರಿ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡದಿಂದಲೂ ಕಲಾವಿದರು ಆಗಮಿಸಲಿದ್ದು, ಆ ದಿನ ಜಿಲ್ಲೆಯ ತುಳು ಬಾಂಧವರಿಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಂದರು.
ಒಕ್ಕೂಟದ ಕಾರ್ಯದರ್ಶಿ ಪಿ.ಎಂ. ರವಿ ಮಾತನಾಡಿ, ಜಿಲ್ಲೆಯಲ್ಲಿ ತುಳು ಭಾಷೆ ಮಾತನಾಡುವ 13 ಜನಾಂಗದವರನ್ನು ಒಂದೇ ವೇದಿಕೆಯಲ್ಲಿ ಸೇರ್ಪಡೆಗೊಳಿಸಲು ತುಳುವೆರ ಸಂಘ ರಚಿಸಲಾಗಿದೆ. ತುಳು ಜನಾಂಗದವರಲ್ಲಿ ಸಾಕಷ್ಟು ಮಂದಿ ಮೂಲ ನಿವಾಸಿಗಳಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘಟನೆಯನ್ನು ಬಲಪಡಿಸುವ ಮೂಲಕ ಆಚಾರ-ವಿಚಾರವನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ರಾಜಕೀಯ ಪಕ್ಷಗಳು ತುಳು ಭಾಷಿಕರನ್ನು ಕೀಳಾಗಿ ಕಾಣುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ವೈ. ರಘು ಆನಂದ ಮಾತನಾಡಿ, ನಾರಾಯಣ ಗುರುಗಳ ಸಂದೇಶದಂತೆ ಸಂಘಟನೆಯಿಂದ ಶಕ್ತನಾಗು ಎಂಬಂತೆ, ತುಳು ಜನಾಂಗದವರು ತಾವು ಒಂದೇ ತಾಯಿಯ ಮಕ್ಕಳು ಎಂಬ ಭಾವನೆಯಿಂದ ಸಂಘಟಿತ ರಾಗಬೇಕೆಂದರು. ಯುವಕರು ಜನಾಂಗದ ಆಚಾರ, ವಿಚಾರವನ್ನು ಮೈಗೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು. ಅಲ್ಲದೆ ಎಲ್ಲಾ ಕ್ಷೇತ್ರದಲ್ಲೂ ಅವಕಾಶಗಳಿದ್ದು, ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕೆಂದರು. ಸರ್ಕಾರದ ಹಲವಾರು ಸೌಲಭ್ಯಗಳ ಮಾಹಿತಿ ಯನ್ನು ಜನಾಂಗದವರಿಗೆ ತಿಳಿಸುವ ಮೂಲಕ ಸೌಲಭ್ಯವನ್ನು ಸದುಪ ಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಸಭೆಯಲ್ಲಿ ಜಿಲ್ಲಾ ತುಳುವೆರ ಒಕ್ಕೂಟದ ಅಧ್ಯಕ್ಷ ಶೇಖರ್ ಬಂಡಾರಿ, ವೀರಾಜಪೇಟೆ ತಾಲೂಕು ಅಧ್ಯಕ್ಷ ಎ.ಎಸ್. ದಾಮೋದರ್ ಆಚಾರ್ಯ, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಭು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಲಹೆಗಾರರಾದ ವೆಂಕಪ್ಪ ರೈ, ಖಜಾಂಚಿ ಮಂಜು, ಬಾಬು ನಾಯಕ್, ರೇಖಾ, ನಿತಿನ್ ಹಾಜರಿದ್ದರು. ಈ ಸಂದರ್ಭ ಸಿದ್ದಾಪುರ ಹೋಬಳಿಯ ತುಳುವೆರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಬಿ.ಜೆ. ಸುರೇಶ್, ಉಪಾಧ್ಯಕ್ಷ ಪಿ.ಸಿ. ರಾಜು, ದೇವಕಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹರೀಶ್ ರೈ, ಸಹ ಕಾರ್ಯದರ್ಶಿ ವಿನೋದ್ ಪೂಜಾರಿ, ಖಜಾಂಚಿ ರೇಖಾ ಕಣ್ಣಂಗಾಲ ಹಾಗೂ ಹತ್ತು ಮಂದಿ ಸಂಘಟನಾ ಕಾರ್ಯದರ್ಶಿ ಗಳಾಗಿ ನೇಮಕ ಮಾಡಲಾಯಿತು. ವಿನೋದ್ ಪೂಜಾರಿ ಸ್ವಾಗತಿಸಿ, ವಂದಿಸಿದರು.