ಮಡಿಕೇರಿ, ಮಾ. 2: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ. ಬಿ.ಜೆ. ಮಹೇಂದ್ರ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ನಿರ್ದೇಶಕ ಹುದ್ದೆಗೆ ನೇಮಕವಾಗಿರುವ ಹಿನ್ನೆಲೆ ಇತ್ತೀಚೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದರು.
ಡಾ. ಬಿ.ಜೆ. ಮಹೇಂದ್ರ ಅವರು ಕೊಡಗಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಶ್ರಮಪಟ್ಟವರನ್ನು ನೆನೆಯುತ್ತ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯು ಕರ್ನಾಟಕದ ಎಲ್ಲಾ ವೈದ್ಯಕೀಯ ಕಾಲೇಜುಗಳ ಪೈಕಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲೂ ಪ್ರಥಮವಾಗಿರಬೇಕೆಂದು ಕರೆಯಿತ್ತರು. ಸಂಸ್ಥೆಯ ಬೋಧಕ ಆಸ್ಪತ್ರೆಯು ಇನ್ನೂ ಉತ್ತಮ ಆಸ್ಪತ್ರೆಯಾಗಿ ಕೊಡಗಿನ ಬಡ ರೋಗಿಗಳಿಗೆ ಅತ್ಯಾಧುನಿಕ ಸೇವೆ ಒದಗಿಸುವ ನಿಟ್ಟಿನಲ್ಲಿ ಜೊತೆಗೂಡಿ ಕರ್ತವ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಸಂಸ್ಥೆಯ ಪ್ರಬಾರ ನಿರ್ದೇಶಕ ಡಾ. ಕೆ.ಬಿ. ಕಾರ್ಯಪ್ಪ, ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಜಗದೀಶ್, ಮುಖ್ಯ ಆಡಳಿತಾಧಿಕಾರಿ ಮೇರಿ ನಾಣಯ್ಯ, ಸ್ಥಾನೀಯ ವೈದ್ಯಾಧಿಕಾರಿ ಡಾ. ಎಸ್. ಮಂಜುನಾಥ್ ಸೇರಿದಂತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ವೈದ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳು ಹಾಜರಿದ್ದರು. ನಿರ್ಗಮಿತ ನಿರ್ದೇಶಕ ಡಾ. ಬಿ.ಜೆ. ಮಹೇಂದ್ರ ಅವರು ಕಾಲೇಜು ಪ್ರಾರಂಭಿಸಲು ಹಾಗೂ ಕಟ್ಟಡ ಅಭಿವೃದ್ಧಿ ಬಗ್ಗೆ ತಳೆದ ನಿರ್ಣಯಗಳು ಹಾಗೂ ಅವರು ಪಟ್ಟ ಶ್ರಮದ ಬಗ್ಗೆ ವಿವಿಧ ಬೋಧಕ ಹಾಗೂ ಬೋಧಕೇತರ ವರ್ಗದ ಸಿಬ್ಬಂದಿ ಶ್ಲಾಘಿಸಿ ಮಾತನಾಡಿದರು.