ಮಾನ್ಯರೆ, ಕೊಡಗಿನಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ನಿರಂತರ ಆಗುತ್ತಿದ್ದು ಅಪಾರ ಬೆಳೆ ಹಾನಿ ಜೊತೆಗೆ ಜನರ ಪ್ರಾಣ ಹಾನಿಯಿಂದ ವ್ಯವಸಾಯಗಾರರಿಗೆ ದೊಡ್ಡ ಸಮಸ್ಯೆಯೇ ಆಗಿದೆ. ಕಾಡಾನೆ ಹಾವಳಿ ಎಲ್ಲಿಗೆ ತಲಪಿದೆ ಎಂದರೆ ಹಗಲು - ರಾತ್ರಿ ಎನ್ನದೆ ಮನೆಯ ಅಂಗಳಕ್ಕೆ ಬಂದು ಮಾಲೀಕರ ಮತ್ತು ಕಾರ್ಮಿಕರ ಮೇಲೆ ಧಾಳಿ ಮಾಡುತ್ತಿದೆ. ಅಲ್ಲದೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಮೇಲೂ ವಾಹನಗಳ ಮೇಲೂ ಧಾಳಿ ಮಾಡಿ ಪ್ರಾಣ ಹಾನಿ ಆಗಿದೆ.

ರಾತ್ರಿ ವೇಳೆಯಲ್ಲಿಯೂ ಮನೆಯ ಸುತ್ತ ಘೀಳಿಡುತ್ತಾ ಹೂ ತೋಟಗಳನ್ನು, ಕಿಟಕಿಯ ಗಾಜುಗಳನ್ನೂ, ವಾಹನಗಳನ್ನೂ ಹಾನಿ ಮಾಡಲು ಪ್ರಾರಂಭಿಸಿದೆ. ಕೆಲವು ಕಡೆಗಳಲ್ಲಿ ಏಳೆಂಟು ಆನೆಗಳ ಹಿಂಡು ಹಗಲು ಹೊತ್ತಿನಲ್ಲೇ ತಿರುಗುತ್ತಿರುವದರಿಂದ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೋಗಲು ಹೆದರುತ್ತಾರೆ. ಜೊತೆಗೆ ಹುಲಿಗಳ ಧಾಳಿಯೂ ಹೆಚ್ಚಾಗುತ್ತಿದ್ದು ಅನೇಕ ಜಾನುವಾರುಗಳು ಇದಕ್ಕೆ ಬಲಿಯಾಗಿದೆ.

ಧನಂಗಾಲ ಗ್ರಾಮದಲ್ಲಿ ಒಬ್ಬರದ್ದೇ ಮೂರು ಹಸುಗಳನ್ನು ಹುಲಿ ತಿಂದ ನಿದರ್ಶನ ಇದೆ. ಇಷ್ಟಾದರೂ ನಾವು ಅರಣ್ಯ ಅಧಿಕಾರಿಗಳನ್ನು ಮಾತ್ರ ದೂಷಿಸುತ್ತೇವೆ. ಪಾಪ, ಅವರು ಮಾತ್ರ ಏನು ಮಾಡಲು ಸಾಧ್ಯವಿದೆ? ಹೆಚ್ಚೆಂದರೆ ಆನೆಗಳನ್ನು ಕಾಡಿಗೂ ಹುಲಿಯನ್ನು ಹಿಡಿದು ಅರಣ್ಯಧಾಮಕ್ಕೂ ಬಿಡಬಹುದಷ್ಟೆ. ಆದರೆ ಅದೇ ಆನೆ ಮತ್ತು ಹುಲಿಗಳು ಕೆಲವು ದಿನಗಳಲ್ಲಿ ಅದೇ ಗ್ರಾಮಕ್ಕೆ ಬಂದ ನಿದರ್ಶನಗಳಿವೆ.

ಆನೆಗಳ ಮತ್ತು ಇತರ ಪ್ರಾಣಿಗಳ ಸಂಖ್ಯೆ ಕೊಡಗಿನಲ್ಲಿ ಹೆಚ್ಚೆಚ್ಚು ಆಗಿ ಜನರೇ ಗುಳೆ ಹೋಗುವ ಸಂದರ್ಭ ಬಂದರೆ ಆಶ್ಚರ್ಯವಿಲ್ಲ. ಉದಾ: ಕರ್ನಾಟಕದ ಮದುಗಿರಿ ಗ್ರಾಮದಲ್ಲಿ ಕೃಷ್ಣಮೃಗಧಾಮ ನಿರ್ಮಿಸಿ ಕೆಲವು ವರ್ಷಗಳಲ್ಲಿ ಕೃಷ್ಣಮೃಗದ ಸಂಖ್ಯೆ ಹೆಚ್ಚೆಚ್ಚು ಆಗುತ್ತಾ ಬಂದುದರಿಂದ ಜನರೇ ಆ ಸ್ಥಳದಿಂದ ಗುಳೆ ಹೋಗಲು ಪ್ರಾರಂಭಿಸಿದ್ದಾರೆ. ಇಂತಹ ಸ್ಥಿತಿ ಕೊಡಗಿಗೂ ಬರುವ ಮೊದಲು ಕೊಡಗಿನ ಜನರು ಒಗ್ಗಟ್ಟಾಗಿ ಸರಕಾರಕ್ಕೆ ಈ ಸಮಸ್ಯೆಯನ್ನು ಮನದಟ್ಟು ಮಾಡಿಸಿ ಪರಿಹಾರಕ್ಕೆ ಪ್ರಯತ್ನಿಸಬೇಕು. ಆನೆಗಳು ಮತ್ತು ಹುಲಿಗಳು ಹಗಲು ಹೊತ್ತಿನಲ್ಲೇ ಮನೆಯ ಅಂಗಳಕ್ಕೆ ನುಗ್ಗಿ ಧಾಂದಲೆ ನಡೆಸುವಾಗ ನಾವು ಸುಮ್ಮನೆ ಇರಬೇಕೆ?

- ಪಿ.ಎಸ್. ಸೋಮಣ್ಣ, ವೀರಾಜಪೇಟೆ.